ನಿಯಂತ್ರಣ ಕೋಶ ವೀಕ್ಷಣೆ
ಬಾಗಲಕೋಟೆ,ಏ.15 : ಬಾಗಲಕೋಟೆ ಸಾರ್ವತ್ರಿಕ ಲೋಕಸಭಾ ಮತಕ್ಷೇತ್ರಕ್ಕೆ ವೆಚ್ಚ ವೀಕ್ಷಕರಾಗಿ ಆಗಮಿಸಿದ ಇಪ್ತಖರ ಅಹಮ್ಮದ ಚೌಧರಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸ್ಥಾಪಿಸಲಾದ ಜಿಲ್ಲಾ ನಿಯಂತ್ರಣ ಕೋಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ನಿಯಂತ್ರಣ ಕೋಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚೆಕ್‍ಪೋಸ್ಟಗಳ ಮೇಲೆ ಕಣ್ಗಾವಲು, ಸಿ-ವಿಜಿಲ್ ಆ್ಯಪ್ ಮೂಲಕ ಮತ್ತು ಸಹಾಯವಾಣಿ ಸಂಖ್ಯೆ 1950ಗೆ ಕರೆಗಳ ಮೂಲಕ ದೂರು ಸ್ವೀಕಾರ, ವಿದ್ಯುನ್ಮಾನ, ಮುದ್ರಣ ಮಾದ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಪರಿಶೀಲನೆ ಕಾರ್ಯ, ಎಫ್‍ಎಸ್‍ಟಿ ತಂಡಗಳ ವಾಹನಗಳ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಕಾರ್ಯಗಳ ಬಗ್ಗೆ ವಿವಿಧ ವಿಭಾಗದ ನೋಡಲ್ ಅಧಿಕಾರಿಗಳಿಗೆ ವೆಚ್ಚ ವೀಕ್ಷಕರು ಮಾಹಿತಿ ಪಡೆದುಕೊಂಡರು.
ಜಿಲ್ಲೆಯಲ್ಲಿ 26 ಚೆಕ್‍ಪೋಸ್ಟಗಳನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಂದು ಚೆಕ್‍ಪೋಸ್ಟಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ. ಅಲ್ಲಿಯ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಣ ಕೊಠಡಿಯಲ್ಲಿಯೇ ದಿನದ 24 ಗಂಟೆಗಳ ಕಾಲ ವೀಕ್ಷಣೆ ಮಾಡಲಾಗುತ್ತಿದೆ. ಅದಕ್ಕಾಗಿ ಸಿಬ್ಬಂದಿಗಳನ್ನು ಪಾಳೆಯ ರೂಪದಲ್ಲಿ ನೇಮಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ನಿಯಂತ್ರಣಕ್ಕೆ ಪ್ರತ್ಯೇಕ ಕೋಶ ತೆರೆಯಲಾಗಿದೆ ಎಂದು ವೀಕ್ಷಕರಿಗೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು. ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಚುನಾವಣಾ ಪ್ರಚಾರ, ಪೇಯ್ಡ್ ನ್ಯೂಸ್‍ಗಳ ಬಗ್ಗೆ ನಿಗಾ ವಹಿಸಲು ವೆಚ್ಚ ವೀಕ್ಷಕರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪಕಾರ್ಯದರ್ಶಿ ಆಗಿರುವ ನಿಯಂತ್ರಣ ಕೊಠಡಿಯ ನೋಡಲ್ ಅಧಿಕಾರಿ ಅಮರೇಶ ನಾಯಕ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ವಿವಿಧ ಕೋಶಗಳ ನೋಡಲ್ ಅಧಿಕಾರಿಗಳಾದ ತೋಟಗಾರಿಕೆ ಉಪ ನಿರ್ದೇಶಕ ರವೀಂದ್ರ ಹಕಾಟೆ, ಕೃಷಿ ಇಲಾಖೆಯ ಉಪನಿರ್ದೇಶಕ ರೂಢಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಮುತ್ತಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಅಮರೇಶ ಎಚ್ ಸೇರಿದಂತೆ ಇತರರು ಇದ್ದರು.