‘ನಮ್ಮ ನಡೆ ಮತಗಟ್ಟೆ ಕಡೆ’ಧ್ಯೇಯದೊಂದಿಗೆ ಮತ ಚಲಾಯಿಸಿ

ಬೆಂಗಳೂರು, ಏ.೧೫-ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಯುವ ಮತದಾರು “ನಮ್ಮ ನಡೆ ಮತಗಟ್ಟೆಯ ಕಡೆ” ಧ್ಯೆಯದೊಂದಿಗೆ ಉತ್ಸಾಹದಿಂದ ಮತ ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕರೆ ನೀಡಿದ್ದಾರೆ.
ನಗರದಲ್ಲಿಂದು ಪಾಲಿಕೆ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗದಲ್ಲಿ ನಡೆದ “ನಮ್ಮ ನಡೆ ಮತಗಟ್ಟೆಯ ಕಡೆ” ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಪ್ರತಿ ಬಾರಿಯ ಚುನಾವಣೆಯಲ್ಲೂ ಕಡಿಮೆ ಮತದಾನ ನಡೆಯುತ್ತದೆ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ವ್ಯವಸ್ಥೆಗಳಿರಲಿದ್ದು, ಈ ಬಾರಿ ಹೆಚ್ಚು ಮತದಾನವಾಗಬೇಕು. ಎಲ್ಲರೂ ಒಟ್ಟಾಗಿ ಇತರರನ್ನೂ ಪ್ರೇರೇಪಿಸಿ ತಪ್ಪದೆ ಮತ ಚಲಾಯಿಸೇಕೆಂದು ತಿಳಿಸಿದರು.
ನಿಮ್ಮ ಮತದಾರರ ಬಗ್ಗೆ ತಿಳಿಯಿರಿ ಎಂಬ ತಂತ್ರಾಂಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳ ಮಾಹಿತಿ ಲಭ್ಯವಿದೆ. ತಾವೆಲ್ಲರೂ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಂಡು ಅಭ್ಯರ್ಥಿಯ ಬಗ್ಗೆ ತಿಳಿದುಕೊಂಡು ಉತ್ತಮ ಅರ್ಭರ್ಥಿಯನ್ನು ಆಯ್ಕೆ ಮಾಡಬಹುದು ಎಂದು ಹೇಳಿದರು.
ಚುನಾವಣಾ ರಾಯಭಾರಿ ಹಾಗೂ ಚಿತ್ರ ನಟರಾದ ರಮೇಶ್ ಅರವಿಂದ್ ಮಾತನಾಡಿ, ಒಂದು ಇಟ್ಟಿಗೆಯಿಂದ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಸಾವಿರಾರು ಇಟ್ಟಿಗೆಗಳು ಸೇರಿದರೆ ಮಾತ್ರ ಕಟ್ಟಡ ಕಟ್ಟಲು ಸಾಧ್ಯ. ಅದೇ ರೀತಿ ಪ್ರತಿಯೊಂದು ಮತದಾರನೂ ಒಂದೊಂದು ಇಟ್ಟಿಗೆಯ ಹಾಗೆ, ಎಲ್ಲರೂ ಒಟ್ಟಾಗಿ ಸೇರಿದರೆ ಮಾತ್ರ ಉತ್ತಮ ಪ್ರಜಾಪ್ರಭುತ್ವವನ್ನು ಕಟ್ಟಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ನಿಮ್ಮಲ್ಲೆರ ಕನಸು ಈಡೇರಬೇಕಾದರೆ ಮತದಾನ ದಿನವಾದ ಏಪ್ರಿಲ್ ೨೬ರಂದು ನೀವೆಲ್ಲರೂ ಒಟ್ಟಾಗಿ ಸೇರಿದರೆ ಮಾತ್ರ ನಿಮ್ಮ ಡ್ರೀಮ್ ಟೀಮ್ ಕಟ್ಟಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯುವ ಮತದಾರರಿಂದ ಮಾತ್ರ ಬದಲಾಯಿಸುವ ಸಾಮರ್ಥ್ಯವಿದೆ. ಆದ್ದರಿಂದ ನಿಮ್ಮ ಸ್ವವಿವೇಚನೆಯಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ ಚಲಾಯುವಂತೆ ಮನವಿ ಮಾಡಿದರು.
ನೀವು ಮಾಡುವ ಆಯ್ಕೆ ಸರಿಯಾಗಿದ್ದರೆ ಯಶಸ್ಸು ತಾನಾಗಿಯೇ ಬರಲಿದೆ. ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿ ಅಲ್ಲ ನಿಮ್ಮ ಒಂದು ಬೆರಳಲ್ಲಿದ್ದು, ಎಲ್ಲರೂ ಮತದಾನ ಮಾಡಲು ಪ್ರೇರೇಪಿಸಿದರು.
ಇನ್ನೂ, ನಮ್ಮ ನಡೆ ಮತಗಟ್ಟೆಯ ಕಡೆ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯ, ಮಹಾರಾಣಿ ಕಾಲೇಜು, ನೃಪತುಂಗಾ ವಿಶ್ವವಿದ್ಯಾನಿಲಯ, ಆರ್.ವಿ ಕಾಲೇಜು, ಎಸ್.ಜೆ.ಎಫ್.ಸಿ ಕಾಲೇಜು ಸೇರಿದಂತೆ ಹಲವಾರು ಕಾಲೇಜುಗಳಿಂದ ೨೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಎಲ್ಲಾ ವಿದ್ಯಾರ್ಥಿಗಳ ಮತದಾನ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜು ಗಾಂಧಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್, ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ಕೇಂದ್ರ ಸ್ವೀಪ್ ನೋಡಲ್ ಅಧಿಕಾರಿ ರಮಾಮಣಿ, ಇನ್ನಿತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.