ಕಾಡಾನೆ ದಾಳಿಗೆ ವೃದ್ಧ ಬಲಿ
ಕೊಡಗು,ಏ.೧೫-ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು,ಪೊನ್ನಂಪೇಟೆ ತಾಲ್ಲೂಕಿನ ಬೀರುಗ ಗ್ರಾಮದ ಚಾಮುಂಡಿಕೊಲ್ಲಿ ರಸ್ತೆಯಲ್ಲಿ ವಾಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬರು ಕಾಡಾನೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಬೀರುಗ ಗ್ರಾಮದ ಅಯ್ಯಮಾಡ ಮಾದಯ್ಯ (೬೩)ಮೃತಪಟ್ಟವರು. ಮುಂಜಾನೆ ಎಂದಿನಂತೆ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ, ಕಾಫಿ ತೋಟದ ನಡುವಿನಿಂದ ನುಗ್ಗಿಬಂದ ಕಾಡಾನೆ ಏಕಾಏಕಿ ದಾಳಿ ನಡೆಸಿದೆ.
ಗ್ರಾಮ ಹಾಗೂ ಸುತ್ತಮುತ್ತಲಲ್ಲಿ ಆನೆಗಳ ಹಿಂಡು ಸಂಚಾರ ಮಾಡುತ್ತಿದೆ. ಇದರಿಂದ ಮನೆಯಿಂದ ಹೊರಬೀಳಲೂ ಭಯವಾಗುತ್ತಿದೆ.ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ತೋಟದ ಕೆಲಸ ಮಾಡಲು ಕೂಲಿ ಕಾರ್ಮಿಕರು ಭಯಭೀತಿಯಿಂದಾಗಿ ಬರುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಕಾಡುಪ್ರಾಣಿಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಆನೆ, ಕರಡಿ, ಚಿರತೆ ದಾಳಿ ಮುಂದುವರಿದಿದೆ. ಇತ್ತೀಚೆಗೆ ರೈತರೊಬ್ಬರು ಮನೆಯಿಂದ ಜಮೀನಿಗೆ ತೆರಳುವಾಗ ಆನೆ ಅಟ್ಟಾಡಿಸಿಕೊಂಡು ಬಂದು ರೈತನನ್ನು ಕೊಂದು ಹಾಕಿತ್ತು. ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ಕಾಂತುರಾಜು ಎಂಬವರು ಮನೆಯಿಂದ ಜಮೀನಿಗೆ ತೆರಳುವಾಗ ಕಾಡಾನೆ ದಾಳಿ ನಡೆಸಿತ್ತು.
ಇದಕ್ಕೂ ಮೊದಲು ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದಲ್ಲಿ ಕಂಬೆಯಂಡ ರಾಜ ದೇವಯ್ಯ (೫೯) ಎಂಬ ಕಾಫಿ ಪ್ಲ್ಯಾಂಟರ್, ಕಾಫಿ ತೋಟಕ್ಕೆ ಹೋಗಿದ್ದಾಗ, ಕಾಫಿ ಗಿಡಗಳ ನಡುವೆ ಅಡಗಿ ನಿಂತಿದ್ದ ಸಲ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿತ್ತು.
ಇದೀಗ ಬರ್ಬರ ಬೇಸಿಗೆ ಪರಿಣಾಮ ಕಾಡಿನಲ್ಲೂ ನೀರು ಇಲ್ಲದಂತಾಗಿದೆ. ಹೀಗಾಗಿ ಆನೆಗಳು ಹಿಂಡು ಹಾಗೂ ಸಲಗಗಳು ನೀರನ್ನು ಅರಸಿ ನಾಡಿಗೆ ಬರುತ್ತಿವೆ. ಕಾಡಿನಲ್ಲಿ ಸಹಜ ಆಹಾರವೂ ಅವುಗಳಿಗೆ ಇಲ್ಲವಾಗಿದೆ. ಇದರಿಂದ ಕಾಫಿತೋಟದ ಜನರಿಗೆ ಜೀವಭಯ ಉಂಟಾಗುತ್ತಿದೆ ಎಂದು ಕೊಡಗಿನ ಜನತೆ ದೂರಿದ್ದಾರೆ.ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.