ಸೌಹಾರ್ದಯುತ ಸಮಾಜ ಕಟ್ಟಲು ಅಂಬೇಡ್ಕರರ ವಿಚಾರಗಳು ಮುಖ್ಯ: ಡಾ. ಅತಿವಾಳೆ
ಬೀದರ:ಏ.15: ದೇಶದಲ್ಲಿ ದ್ವೇಷ ಅಳಿದು ಪ್ರೀತಿ ಮೂಡಲು ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ತಿಳಿಸಿದರು.
ಡೆನ್ ನೆಟ್ವರ್ಕ್, ಸುದ್ದಿಸಮಯ ನ್ಯೂಜ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರರ 133ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅಸ್ಪøಶ್ಯತೆಯ ನೋವು ಅರ್ಥಮಾಡಿಕೊಂಡ ಬಾಬಾ ಸಾಹೇಬರು ದಲಿತರ ಧ್ವನಿಯಾಗಿ ನಿಂತರು. ಛಲದಿಂದ ಹೋರಾಟ ಮಾಡಿ ನೊಂದವರ ಬಾಳಿನ ಬೆಳಕಾದರು. ಈ ದೇಶಕ್ಕೆ ಒಂದು ಕಾನೂನು ಚೌಕಟ್ಟಿನ ಅವಶ್ಯಕತೆ ಮನಗಂಡು ಸಂವಿಧಾನ ನೀಡಿದರು. ಹೀಗಾಗಿಯೇ ಅವರು ಜ್ಞಾನಸೂರ್ಯ, ರಾಷ್ಟ್ರದ ಬೆಳಕು, ಮಾತೃಹೃದಯಿ ಮತ್ತು ಕ್ರಾಂತಿಸೂರ್ಯ ಎನಿಸಿಕೊಂಡರು ಎಂದು ಅತಿವಾಳೆ ತಿಳಿಸಿದರು.
ಸುದ್ದಿಸಮಯ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ರವೀಂದ್ರ ಸ್ವಾಮಿ ಮಾತನಾಡಿ ಡಾ. ಬಾಬಾ ಸಾಹೇಬರು ಮನುಕುಲಕ್ಕೆ ದಾರಿದೀಪವಾಗಿದ್ದಾರೆ. ಇಂದು ಅವರು ನೀಡಿರುವ ಸಂವಿಧಾನವು ರಾಷ್ಟ್ರದ ಜನತೆ ಸುಖದಿಂದ ಬದುಕಲು ಕಾರಣವಾಗಿದೆ. ಆದ್ದರಿಂದ ಬಾಬಾ ಸಾಹೇಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಪ್ರಮುಖರಾದ ಸಂಜಯ್ ಮಠಪತಿ, ವರದಯ್ಯ ಸ್ವಾಮಿ, ದಯಾನಂದ ಸ್ವಾಮಿ ಸಿರ್ಸಿ, ಶ್ರೀಕಾಂತ ಸ್ವಾಮಿ ಸೋಲಪುರ, ಕಾರ್ತಿಕ ಸ್ವಾಮಿ ಮಠಪತಿ, ಪತ್ರಕರ್ತ ಮಹಾರುದ್ರ ಡಾಕುಳಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.