ಲೋಕಸಭೆ ಚುನಾವಣೆಯಲ್ಲಿ ಮರಾಠಾ ಸಮಾಜದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಬೀದರ, ಏ. 13ಃ ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬೀದರ ಕ್ಷೇತ್ರದಿಂದ ಮರಾಠಾ ಸಮಾಜದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಗರದ ನೌಬಾದನಲ್ಲಿರುವ ಮರಾಠಾ ಸಮಾಜದ ಭವನದಲ್ಲಿ ದಿನಾಂಕ 12 ರಂದು ನಡೆದ ಜಿಲ್ಲೆಯ ಮರಾಠಾ ಸಮಾಜದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರು ಹಾಗೂ ಸಮಾಜದ ಹಿರಿಯ ಮುಖಂಡರಾದ ಪದ್ಮಾಕರ ಪಾಟೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಹಿರಿಯ ನಾಯಕರಾದ ಡಾ. ದಿನಕರರಾವ ಮೊರೆಯವರು, ಕ್ಷೇತ್ರದಲ್ಲಿ 3 ಲಕ್ಷಕ್ಕೂ ಅಧಿಕ ಮರಾಠಾ ಮತದಾರರು ಇದ್ದು, ಲೋಕಸಭೆ ಚುನಾವಣೆಯಲ್ಲಿ ಮರಾಠಾ ಸಮಾಜದಿಂದ ಓರ್ವ ಅಭ್ಯರ್ಥಿಯನ್ನು ಪಕ್ಷೇತರವಾಗಿ ಅಖಾಡಾಕ್ಕೆ ಇಳಿಸಬೇಕಾಗಿದೆ. ಏಕಂದರೆ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಮರಾಠಾ ಸಮಾಜವನ್ನು ಕಡೆಗಣಿಸುತ್ತಿವೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮರಾಠಾ ಸಮಾಜದ ಮತಗಳು ಪಡೆದು ಗೆಲ್ಲುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಗೆದ್ದ ಬಳಿಕ ಮರಾಠಾ ಸಮಾಜದ ಬೇಡಿಕೆಗಳು ಈಡೇರಿಸಲು ಮೀನ-ಮೇಷ ಏಣಿಸುತ್ತಿವೆ. ರಾಷ್ಟ್ರೀಯ ಪಕ್ಷಗಳಿಗೆ ಪಾಠ ಕಲಿಸಲು ಹಾಗೂ ಸದನದಲ್ಲಿ ಮರಾರಾಠಾ ಸಮಾಹದ ಬಗ್ಗೆ ಧ್ವನಿ ಎತ್ತಲು ಲೋಕಸಭೆ ಚುನಾವಣೆಯಲ್ಲಿ ಮರಾಠಾ ಸಮಾಜದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡರಾದ ಜನಾರ್ಧನ ಬಿರಾದಾರ ಅವರು ಮಾತನಾಡುತ್ತ, ಜಿಲ್ಲೆಯ ಮರಾಠಾ ಸಮಾಜದ ನಾಯಕರ, ಹಿರಿಯರ ಸಮ್ಮುಖದಲ್ಲಿ ಕಾರ್ಯಕರ್ತರ ಕೋರ್ ಕಮಿಟಿ ಸಭೆಯನ್ನು 1-2 ದಿನಗಳಲ್ಲಿ ಕರೆದು ಲೋಕಸಭೆ ಚುನಾವಣೆಯಲ್ಲಿ ಮರಾಠಾ ಸಮಾಜದಿಂದ ಒಮ್ಮತದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಅನಿಲ ಭೂಸಾರೆ, ತಾತ್ಯಾರಾವ ಪಾಟೀಲ ಬಸವಕಲ್ಯಾಣ, ವಿಜಯಕುಮಾರ ಕಣಜಿಕರ್, ಭಾಲ್ಲಿ ಎ.ಪಿ.ಎಂಸಿ ಮಾಜಿ ಅಧ್ಯಕ್ಷರಾದ ಕಿಶನರಾವ ಪಾಟೀಲ ಇಂಚೂರಕರ್, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಬಾಬುರಾವ ಕಾರಬಾರಿ, ವೈಜಿನಾಥ ತಗಾರೆ, ನಾರಾಯಣ ಗಣೇಶ ವಕೀಲಕರು, ಅಂಗದರಾವ ಜಗತಾಪ, ಅನಿಲ ಕಾಳೆ, ರಘುನಾಥರಾವ ಜಾಧವ, ಶಿವಾಜಿರಾವ ಪಾಟೀಲ ಮುಂಗನಾಳ, ಡಾ. ಬಾಲಾಜಿ ಸಾವಳೆ, ಬಾಬುರಾವ ಹುಣಸನಾಳೆ ಮತ್ತು ನರೇಶ ಭೋಸ್ಲೆ ಆಳಂದ ಅವರು ಸೇರಿದಂತೆ ಜಿಲ್ಲೆಯ ಮರಾಠಾ ಸಮಾಜದ ಹಿರಿಯರು, ಮುಖಂಡರು, ಯುವಕರು ಇದ್ದರು.