ಜೆಡಿಎಸ್-ಬಿಜೆಪಿ ಒಟ್ಟಾಗಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.15: ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜೊತೆಯಾಗಿ ಚುನಾವಣೆಯನ್ನು ಎದುರಿಸಿದ್ದರೆ ರಾಜ್ಯದಲ್ಲಿ ಖಂಡಿತವಾಗಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಅವರು ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಪರ ಮತಯಾಚನೆ ಮಾಡಿ ಮಾತನಾಡಿದರು.
ಮಾಜಿ ಪ್ರಧಾನಿ ದೇವೇಗೌಡರಂತೆ ಮಾಜಿ ಸಿಎಂ ಕುಮಾರಣ್ಣನವರಿಗೂ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ. ಎರಡು ಅವಧಿ ಮುಖ್ಯಮಂತ್ರಿಯಾದರೂ ಕೇವಲ 34 ತಿಂಗಳು ಮಾತ್ರ ಆಡಳಿತ ನಡೆಸಲು ಅವಕಾಶ ಸಿಕ್ಕಿದ್ದು. ಸಿಕ್ಕ ಸಮಯದಲ್ಲಿ ಹತ್ತಾರು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ ಪರಿಣಾಮ ರಾಜ್ಯದ ಜನತೆ ಕುಮಾರಣ್ಣನ ಮೇಲೆ ಇನ್ನೂ ಭರವಸೆ ಇಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸಲು ಕುಮಾರಣ್ಣನವರಿಗೆ ಮನಸ್ಸಿರಲಿಲ್ಲ ಆದರೆ ಕೇಂದ್ರದ ನಾಯಕರುಗಳು ಹಳೆ ಮೈಸೂರು ಪ್ರದೇಶದಲ್ಲಿ ಕುಮಾರಣ್ಣ ಸ್ಪರ್ದೆ ಮಾಡಿದರೆ 12 ಲೋಕಸಭಾ ಚುನಾವಣೆಗಳ ಫಲಿತಾಂಶಕ್ಕೆ ಅನುಕೂಲವಾಗಲಿದೆ ಎಂಬ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕುಮಾರಣ್ಣನವರು ಅನಿವಾರ್ಯವಾಗಿ ಸ್ಪರ್ದಿಸಬೇಕಾಯಿತು. ಇಬ್ಬರು ಅನುಭವಿ ಮಾಜಿ ಮುಖ್ಯಮಂತ್ರಿಗಳು ಈ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಹಗಲುರಾತ್ರಿ ಶ್ರಮಿಸುತ್ತಿರುವುದು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಸರ್ಕಾರ ಬರಲಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜೊತೆಯಾಗಿ ಚುನಾವಣೆಯನ್ನು ಎದುರಿಸಿದ್ದರೆ ರಾಜ್ಯದಲ್ಲಿ ಖಂಡಿತವಾಗಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು. ಲೋಕಸಭಾ ಚಿನಾವಣೆಗಳ ನಂತರ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆ ಇದೆ. ನಮ್ಮ ಕಾರ್ಯಕರ್ತರು ವಿಚಲಿತರಾಗುವ ಅವಶ್ಯಕತೆಯಿಲ್ಲ. ಪ್ರಧಾನಿ ನರೇಂದ್ರಮೋದಿಯವರ ದೂರದೃಷ್ಟಿಯ ಫಲದಿಂದಾಗಿ ಭಾರತ ಇಂದು ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿದೆ. ಹಲವಾರು ವರ್ಷಗಳಿಂದಲೂ ಕಾವೇರಿ ನೀರಿನ ಸಮಸ್ಯೆ ಜ್ವಲಂತವಾಗಿದೆ. ಇದಕ್ಕೆ ದೇವೇಗೌಡರು ಹಾಗೂ ಕುಮಾರಣ್ಣ ಪರಿಹಾರ ಸೂತ್ರ ಕಂಡುಹಿಡಿಯಲಿದ್ದಾರೆ. ಆದ್ದರಿಂದ ನಿಮ್ಮ ಒಂದೊಂದ ಮತವೂ ಅಮೂಲ್ಯವಾಗಿದ್ದು ನಿಮ್ಮ ಮನೆಮಗನಂತಿರುವ ಕುಮಾರಣ್ಣನನ್ನು ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸಲು ಪಣತೊಟ್ಟು ಕೆಲಸ ಮಾಡಬೇಕು ಎಂದರು.
ಕಳೆದ ಒಂದು ವರ್ಷದಿಂದ ಈ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಜನರ ನಡುವೆ ಇದ್ದು ಅವರ ಸಮಸ್ಯೆಗಳನ್ನು ಪರಿಹರಿಸುವ ಗುಣವುಳ್ಳ ಮಂಜಣ್ಣನವರಿಗೆ ಮಾಜಿ ಸಚಿವ ನಾರಾಯಣಗೌಡರು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುವುದು ಸಂತಸ ತಂದಿದೆ. ತಾಲ್ಲೂಕಿನ ಅಭಿವೃದ್ದಿ ವಿಷಯಗಳಲ್ಲಿ ಇಬ್ಬರೂ ಜೊತೆಗೂಡಿ ಕೆಲಸ ಮಾಡಿದರೆ ಖಂಡಿತವಾಗಿಯೂ ಈ ಕ್ಷೇತ್ರ ಅಭಿವೃದ್ದಿಯಾಗಲಿದೆ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪನವರ ಸಹಕಾರದಿಂದ 265 ಕೋಟಿ ರೂಪಾಯಿಗಳ ಏತನೀರಾವರಿ ಯೋಜನೆ ಅನುಷ್ಟಾನಗೊಂಡಿದ್ದು. ಹೊಸಹೊಳಲು ಮೇಲ್ಗಾಲುವೆಗೂ ಸಹ ಅನುದಾನ ಬಿಡುಗಡೆ ಮಾಡಿಸಲು ಇಬ್ಬರೂ ಒಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ 17-04-2024 ನೇ ಬುಧವಾರ 11-00 ಘಂಟೆಗೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ಬೃಹತ್ ಬಹಿರಂಗ ಸಭೆ ಏರ್ಪಡಿಸಿದ್ದು ಅಂದಿನ ಸಭೆಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಮನವಿ ಮಾಡಿದರು.
ಪ್ರಚಾರ ಸಭೆಯಲ್ಲಿ ಶಾಸಕ ಹೆಚ್.ಟಿ.ಮಂಜು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಮನ್ ಮುಲ್ ನಿರ್ದೇಶಕ ಡಾಲು ರವಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು,ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಕಾನೂನು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಕುರುಬಹಳ್ಳಿ ನಾಗೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗರಾಜು, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಕಾರ್ಯಾದ್ಯಕ್ಷ ರಾಜೇಗೌಡ, ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು, ಅಶ್ವಿನ್ ಕುಮಾರ್, ಸಂಜೀವಪ್ಪ, ರಾಜೇನಹಳ್ಳಿ ಕುಮಾರಸ್ವಾಮಿ ಸೇರಿದಂತೆ ನೂರಾರು ಜೆಡಿಎಸ್ ಬಿಜೆಪಿ ಮುಖಂಡರು ಕಾರ್ಯಕರ್ತರಿದ್ದರು.