ಸ್ಟಾರ್ ಚಂದ್ರು ಪರ ವಿಜಯ್ ರಾಮೇಗೌಡ ಮತಯಾಚನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.15 : ಮಂಡ್ಯ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ತಾಲೂಕು ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆಯ ಪ್ರಚಾರ ಕಾರ್ಯ ನಡೆಸಿ ಮತಯಾಚನೆ ಮಾಡಿದರು.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶೀಳನೆರೆ ಹೋಬಳಿ ವ್ಯಾಪ್ತಿಯ ಮುರುಕನಹಳ್ಳಿ ಪಂಚಾಯಿತಿಯ ಹಿರಳಹಳ್ಳಿ ಮತ್ತು ಅಕ್ಕಿಮಂಚನಹಳ್ಳಿ ಮುಂತಾದ ಕಡೆ ಮುಖಂಡರುಗಳ ಸಭೆ ಏರ್ಪಡಿಸಿ ಮನೆ ಮನೆಗೂ ಪಕ್ಷದ ಗ್ಯಾರಂಟಿ ಯೋಜನೆಯ ಕರಪತ್ರಗಳನ್ನು ಹಂಚುವ ಮೂಲಕ ಮತಯಾಚನೆ ನಡೆಸಲಾಯಿತು.
ಗ್ಯಾರಂಟಿ ಯೋಜನೆಗಳ ಕರಪತ್ರ ವಿತರಿಸಿ ಮತದಾರರೊಂದಿಗೆ ಮಾತನಾಡಿದ ಮುಖಂಡ ಬೂಕನಕೆರೆ ವಿಜಯರಾಮೇಗೌಡ ಗ್ಯಾರಂಟಿ ಯೋಜನೆಗಳಿಂದ ತೀವ್ರ ಬರಗಾಲದ ಸನ್ನಿವೇಶದಲ್ಲಿಯೂ ಗ್ರಾಮೀಣ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಮಹಿಳೆಯರು ತಮ್ಮ ತಮ್ಮ ಕುಟುಂಬಕ್ಕೆ ಅಗತ್ಯವಾದ ಗೃಹ ಬಳಕೆಯ ವಸ್ತುಗಳನ್ನು ಕೊಂಡು ಕೊಳ್ಳುತ್ತಿದ್ದಾರೆ. ಉಚಿತ ಬಸ್ ಪ್ರಯಾಣ ಸೌಲಭ್ಯದಿಂದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಭಗವಂತನ ಅನುಗ್ರಹ ಪಡೆಯುತ್ತಿದ್ದಾರೆ. ಉಚಿತ ವಿದ್ಯುತ್ ಸೌಲಭ್ಯದಿಂದ ಕುಟುಂಬದ ಯಜಮಾನನ ಆರ್ಥಿಕ ಹೊರೆ ಕಡಿಮೆಯಾಗಿದೆ. ಯುವನಿಧಿ ಯೋಜನೆಯ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರೆ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಅರ್ಜಿ ಹಾಕಲು ತಂದೆ ತಾಯಂದಿರ ಬಳಿ ಕೈಚಾಚದಂತಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುತ್ತದೆ. ಪ್ರತಿ ಕುಟುಂಬದ ಮಹಿಳೆಯ ಖಾತೆ ವಾರ್ಷಿಕ 01 ಲಕ್ಷ ರೂ ಬರುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ 50 ರಷ್ಟು ಮೀಸಲಾತಿ ಜಾರಿಗೆ ಬರಲಿದೆಯಲ್ಲದೆ ಈಗಿರುವ ಸೇ 50 ರ ಮೀಸಲಾತಿ ನಿರ್ಭಂದವನ್ನು ತೆಗೆದು ಎಲ್ಲಾ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಮಕ್ಕಳು ಸರ್ಕಾರಿ ಉದ್ಯೋಗ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ. ಸಮ ಸಮಾಜ ನಿರ್ಮಾಣಕ್ಕಾಗಿ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ಹಾಕುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಜಿ.ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು, ಹಿರಳಹಳ್ಳಿ ಗ್ರಾಮದ ನವೀನ್, ವೆಂಕಟೇಶ್, ಕುಮಾರಸ್ವಾಮಿ, ಮಹೇಶ್, ಇಂದ್ರ, ಯೋಗೇಶ್, ಗೋಪಾಲಗೌಡರ ಅಣ್ಣೇಗೌಡ ಮಾಸ್ಟರ್ ವಿಜಯ್ ಕುಮಾರ್ ಹೆಚ್.ಟಿ., ಶ್ರೀಕಂಠಯ್ಯ, ಪಾಂಡು ಪ್ರವೀಣ್, ಪುಟ್ಟರಾಜು, ರವಿ, ಸೇರಿದಂತೆ ಹಲವರು ಮತಯಾಚನೆಯಲ್ಲಿ ಭಾಗಿಯಾಗಿದ್ದರು.