ಮಕ್ಕಳಿಗೆ ಬೇಸಿಗೆ ಶಿಬಿರಗಳು ವರದಾನವಾಗಿವೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.15: ಮಕ್ಕಳ ಸಮಗ್ರವಾದ ವ್ಯಕ್ತಿತ್ವ ವಿಕಸನಕ್ಕೆ ಮಕ್ಕಳ ಬೇಸಿಗೆ ಶಿಬಿರಗಳು ವರದಾನವಾಗಿವೆ ಎಂದು ದೇವರೂರಿನ ಮಾನವಧರ್ಮ ಪೀಠದ ಪೀಠಾಧ್ಯಕ್ಷರಾದ ಸನಾತನ ಧರ್ಮರತ್ನಾಕರ ಡಾ.ಮಾದೇಶ್ ಗುರೂಜಿ ಹೇಳಿದರು.
ಅವರು ತಾಲೂಕಿನ ಬೆಡದಹಳ್ಳಿಯ ಪಂಚಭೂತೇಶ್ವರ ಮಠದ ಆವರಣದಲ್ಲಿ ಮಂಡ್ಯ ಜಿಲ್ಲಾ ಭಾರತ ಸೇವಾ ದಳದ ಸಂಯುಕ್ತಾಶ್ರಯದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ 30 ದಿನಗಳ ವಸತಿ ಸಹಿತ ಉಚಿತ ಮಕ್ಕಳ ಬೇಸಿಗೆ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ರಜಾ ದಿನಗಳಲ್ಲಿ ವಿಶೇಷ ಮಕ್ಕಳ ಬೇಸಿಗೆ ಶಿಬಿರವನ್ನು ರೂಪಿಸಿ ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು, ಆಟೋಟ, ಕರಾಟೆ, ಯೋಗ, ಧ್ಯಾನ, ಚಿತ್ರಕಲೆ, ಕ್ರಾಫ್ಟ್, ಭಾಷಣ ಸ್ಪರ್ಧೆ, ಭರತನಾಟ್ಯ, ಜಾನಪದ ಗೀತ ಗಾಯನ, ಕಥೆ ಹೇಳುವುದು, ದೇವಾಲಯಗಳ ವೀಕ್ಷಣೆ, ವಿಜ್ಞಾನ ಆವಿಷ್ಕಾರ, ಓರಿಗಾಮಿ ಸೇರಿದಂತೆ ಗ್ರಾಮೀಣ ಸೊಗಡಿನ ಕ್ರೀಡೆಗಳ ಬಗ್ಗೆ ವಿಶೇಷ ತರಭೇತಿ ನೀಡುತ್ತಿರುವುದರಿಂದ ಮಕ್ಕಳ ವ್ಯಕ್ತಿತ್ವವು ಸಮಗ್ರವಾಗಿ ಅಭಿವೃದ್ಧಿಯಾಗುತ್ತದೆ ಆದ್ದರಿಂದ ಭಾರತ ಸೇವಾದಳದ ಮಂಡ್ಯಜಿಲ್ಲಾ ಶಾಖೆಯ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಡಾ.ಮಾದೇಶ್ ಗುರೂಜಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮನ್‍ಮುಲ್ ನಿರ್ದೇಶಕ ಡಾಲುರವಿ ಮಾತನಾಡಿ ನಾಲ್ಕು ಗೋಡೆಗಳ ನಡುವೆ ಬಂದಿಗಳಾಗಿ ಸದಾ ಕಾಲವೂ ಪುಸ್ತಕ, ಓದು ಎಂಬ ಒತ್ತಡದಿಂದ ಮುಕ್ತರಾಗಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಆಟವಾಡಿಕೊಂಡು ಸಂತೋಷದಿಂದ ಮುಕ್ತವಾಗಿ ಕಲಿಕೆಗೆ ಮುಂದಾಗಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದರು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಪೀಠಾಧಿಪತಿಗಳಾದ ಶ್ರೀ ಗಂಗಾಧರಶಿವಾಚಾರ್ಯ ಸ್ವಾಮೀಜಿ, ಸಾಂಸ್ಕೃತಿಕ ಸಂಘಟಕ ಶ್ರೀ.ಗೋಪಾಲಕೃಷ್ಣ ಅವಧಾನಿ, ಮುಖಂಡ ಮೊಟ್ಟೆಮಂಜು, ಬೆಡದಹಳ್ಳಿ ಪಂಚಭೂತೇಶ್ವರ ಮಠದ ಕಾರ್ಯದರ್ಶಿ ಕಾಂತರಾಜು, ಪತ್ರಕರ್ತ ಕಾಡುಮೆಣಸ ಚಂದ್ರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಡದಹಳ್ಳಿ ಪಂಚಭೂತೇಶ್ವರ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.