ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು.ಏ.15:- ಮುಖ್ಯಮಂತ್ರಿ ಸಿದ್ದರಾಮಯ್ಯ-ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೋಡೆತ್ತಿನಿಂದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಲ್ಲದೆ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಆಡಳಿತದಲ್ಲಿರುತ್ತದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಹೇಳಿದರು.
ಮೈಸೂರು ನಗರ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮೈಸೂರು,ಮಂಡ್ಯ, ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇರುವ ಕಾರಣ ಖಂಡಿತ ಜಯಗಳಿಸುವ ನಂಬಿಕೆ ಇದೆ ಎಂದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಸರಿಸಾಟಿಯಾದ ನಾಯಕರು ಪ್ರತಿಪಕ್ಷದವರಲ್ಲಿ ಇಲ್ಲ. ಈ ಜೋಡಿ ಇರುವ ತನಕವೂ ಕಾಂಗ್ರೆಸ್ ಸೋಲಿಸಲಾಗದು. ಕರ್ನಾಟಕದಲ್ಲಿ 20ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿಯುವಂತಾಗಬೇಕಾಗಿದೆ ಎಂದರು. ಕೇಂದ್ರದಲ್ಲಿ ಚುನಾವಣಾ ಬಾಂಡ್ ಪಡೆದು ದೊಡ್ಡ ಹಗರಣ ನಡೆದಿದೆ. ಐಟಿ,ಇಡಿ,ಸಿಬಿಐ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ದೊಡ್ಡ ಮೊತ್ತದ ಹಣ ಸಂಗ್ರಹಿಸಲಾಗಿದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯು ನಮಗೆ ಪಾವಿತ್ರ್ಯ ದಿನವಾಗಿದೆ. ಸಾಮಾನ್ಯ ಕಾರ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪುತ್ತಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಮಹಿಳೆಯರಿಗೆ ಅವಹೇಳನ ಮಾಡಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕುವಾರಸ್ವಾಮಿ ಅವರಿಂದ ಇಂತಹ ಮಾತುಗಳು ಬಂದಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಮತದ ಹಕ್ಕನ್ನು ಸಂವಿಧಾನದಲ್ಲಿ ನೀಡುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ಅಂಬೇಡ್ಕರ್ ಆತ್ಮಕ್ಕೆ ಶಾಂತಿ ತರುತ್ತಿದ್ದೆವೆ?ಯೇ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಬೇಕು ಎಂದು ಹೇಳಿದರು.
ದೇಶದಲ್ಲಿ ಕೋಮುವಾದ ಜಾಸ್ತಿಯಾಗಿದೆ. ನೆಮ್ಮದಿಯಿಂದ ಬದುಕುವುದನ್ನು ಹಾಳುಮಾಡಿ ಅಭದ್ರತೆ ವಾತಾವರಣ ನಿರ್ವಾಣ ಮಾಡಲಾಗಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಹೊರತು ಅದರ ಅಡಿಪಾಯ ಕೆದಕಲು ಸಾಧ್ಯವಿಲ್ಲ. ಎಂದಿಗೂ ಅಲ್ಲುಗಾಡಿಸಲಾಗದು. ಬದಲಾವಣೆ ಮಾಡಲು ಹೊರಟರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದರು.
ಇಂದು ಮಾನವೀಯತೆ ಉಳಿಯಬೇಕಿದೆ. ಒಂದು ಧರ್ಮದಲ್ಲಿ ಮಾತ್ರ ಮಾನವೀಯತೆ ಎಂಬುದು ಇಲ್ಲ. ಎಲ್ಲಾ ಧರ್ಮಗಳಲ್ಲಿ ವಾನವೀಯತೆ ಅಡಗಿದೆ. ಸಂವಿಧಾನ ಇಲ್ಲದಿದ್ದರೆ ತಳಸಮುದಾಯ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನು ಗಮನಿಸಬೇಕು. ಪಕ್ಷದ ಮುಖಂಡರು, ಪದಾಧಿಕಾರಿಗಳಲ್ಲಿ ಸ್ಟೇಜ್‍ನಲ್ಲಿ ನಿಲ್ಲುವುದಕ್ಕೆ ಇರುವ ಉತ್ಸಾಹ ಕೆಲಸ ಮಾಡಲು ತೋರಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯ ಕೆಲಸ ಮಾಡುವವರಿಗೆ ಮೊದಲ ಆದ್ಯತೆ ನೀಡುತ್ತೇವೆ ಎಂದರು.
ಮೈಸೂರು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಕುಮಾರ್ ಮಾತನಾಡಿ, ಬಹುಶಾಸ್ತ್ರೀಯ ಪದ್ದತಿಯನ್ನು ಮುಗಿಸಿ ದೇಶದ ಸಂವಿಧಾನ ಮುಗಿಸುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಸಂವಿಧಾನದ ಆಶಯಗಳು ಸಮರ್ಪಕವಾಗಿ ಜಾರಿಯಾಗಬೇಕಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ನಾವು ಮುಂದುವರಿಯಬೇಕೆಂದು ಅಂಬೇಡ್ಕರ್ ಅವರು ಹೇಳಿದ ಮಾತು ಕನಸಾಗಿಯೇ ಉಳಿದಿದೆ. ಅವುಗಳ ಜಾರಿಗೆ ಕಾಂಗ್ರೆಸ್ ಗ್ಯಾರಂಟಿಯೊಂದೆ ತೀರ್ಮಾನ ಎಂದು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಾಸಕ ಕೆ.ಹರೀಶ್ ಗೌಡ, ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಮಹಾಪೌರರಾದ ನಾರಾಯಣ, ಬಿ.ಎಲ್.ಭೈರಪ್ಪ, ಟಿ.ಬಿ.ಚಿಕ್ಕಣ್ಣ, ಎಂ.ಪ್ರದೀಪ್ ಕುಮಾರ್, ಕೆ.ವಿ.ಮಲ್ಲೇಶ್, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ವಕ್ತಾರ ಕೆ.ಮಹೇಶ್, ಎಂ.ಶಿವಣ್ಣ, ಈಶ್ವರ್ ಡಿ.ಚಕ್ಕಡಿ, ಭಾಸ್ಕರ್, ಶಿವಪ್ರಸಾದ್ ಮತ್ತಿತರರು ಹಾಜರಿದ್ದರು.