ಶೋಷಿತರ ಧ್ವನಿ ಡಾ. ಬಿ. ಆರ್. ಅಂಬೇಡ್ಕರ್ : ಪ್ರೊ. ಮೇಧಾವಿನಿ ಕಟ್ಟಿ
ಕಲಬುರಗಿ:ಏ.14: ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತರ ಧ್ವನಿಯಾಗಿದ್ದರು. ಸಾಮಾಜಿಕ ಚಿಂತಕ, ರಾಜಕೀಯ ಮೇಧಾವಿ, ಆರ್ಥಿಕ ತಜ್ಞರಾಗಿ ಸಮಾನತೆ, ಸ್ವಾತಂತ್ರ್ಯ ಮತ್ತು ಬಾತೃತ್ವ ಅಂಶಗಳನ್ನು ಬಲವಾಗಿ ಪ್ರತಿಪಾದಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ದಲಿತರು ಹಾಗೂ ನೊಂದವರ ಆಶಾಕಿರಣವಾಗಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ ಅಭಿಪ್ರಾಯಪಟ್ಟರು.
ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅಭಿಮಾನಿ ಬಳಗದ ವತಿಯಿಂದ ನಗರದ ಕನ್ನಡ ಭವನದ ಮುಂಭಾಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸವದ ಅಂಗವಾಗಿ ಆಯೋಜಿಸಿದ ಸಂವಿಧಾನ ಓದು ಮತ್ತು ಎಲ್ಲರ ಅಂಬೇಡ್ಕರ್ ಪುಸ್ತಕ ಬಿಡುಗಡೆ, ಪುಸ್ತಕ ಪ್ರದರ್ಶನ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಗತ್ತ ವೃತ್ತದವರೆಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಖ್ಯಾತ ಅನುವಾದ ಸಾಹಿತಿ ಪ್ರೊ. ಆರ್.ಕೆ. ಹುಡುಗಿ ಮುಖ್ಯ ಅತಿಥಿಯಾಗಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಮಹಾಜ್ಞಾನಿ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಅವರ ಬಹುವಿಷಯ ಜ್ಞಾನದಿಂದ ವಿಶ್ವಕ್ಕೆ ಮಾದರಿಯಾದ ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ವಿದ್ವತ್ತಿಗೆ ಇಡೀ ವಿಶ್ವವೇ ಗೌರವಿಸುತ್ತಿದೆ ಎಂದು ಹೇಳಿದರು.
ಬುದ್ಧ, ಬಸವ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಮಾತ್ರ ಜಗತ್ತು ಅರ್ಥವಾಗುತ್ತದೆ. ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು ‘ಸಂವಿಧಾನ ಓದು ಮತ್ತು ಎಲ್ಲರ ಅಂಬೇಡ್ಕರ್’ ಪುಸ್ತಕ ಪ್ರದರ್ಶನ ಮಾಡಿ ಕೈಯಲ್ಲಿ ಹಿಡಿದು ಜಾಥಾ ಹಮ್ಮಿಕೊಂಡಿರುವುದು ವಿನೂತನ ಪರಿಕಲ್ಪನೆಯಾಗಿದೆ. ಈ ಮೂಲಕ ಎಲ್ಲರ ಅಂಬೇಡ್ಕರ್ ಎಲ್ಲರ ಮನದಲ್ಲಿ ಜೀವಂತವಾಗಿದ್ದಾರೆ ಎಂಬ ಸಂದೇಶ ತಲುಪಿಸುತ್ತಿರುವ ಈ ಜಾಥಾ ಬಳಗದ ಅಭಿಮಾನಿಗಳು ನಿಜಕ್ಕೂ ಅಭಿನಂದನಾರ್ಹರು. ಪುಸ್ತಕವನ್ನು ಓದುವ ಸಂಸ್ಕøತಿ ಬೆಳೆಸಿಕೊಂಡರೆ ದೇಶವನ್ನು ಪ್ರೀತಿಸಿದಂತೆ ಆಗಲಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ ದೇಶದ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯಲು ಶ್ರೇಷ್ಠ ಸಂವಿಧಾನವನ್ನು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ನೀಡಿದ್ದಾರೆ. ಪ್ರಜಾಪ್ರಭುತ್ವ ಯಶಸ್ವಿಗೊಳ್ಳಲು ಸಂವಿಧಾನವೇ ಆಧಾರವಾಗಿದೆ. ಇಂದು ನಡೆದಿರುವ ಕಾಲ್ನಡಿಗೆ ಜಾಥಾ ಸಂವಿಧಾನ ಆಶಯ ಮತ್ತು ಮೌಲ್ಯಗಳನ್ನು ಜನರಿಗೆ ತಿಳಿಸುವ ಪ್ರಯತ್ನವಾಗಲಿದೆ ಎಂದರು.
ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅಭಿಮಾನಿ ಬಳಗದ ಅಧ್ಯಕ್ಷ ಡಾ. ಪ್ರಕಾಶ್ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗತ್ತಿನ ಮಹಾನ್ ಜ್ಞಾನಿಯಾಗಿರುವ ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಕಂಡಂತ ಕನಸಿನ ಭಾರತ ಯಶಸ್ವಿಯಾಗಲು ಸಂವಿಧಾನದ ಆಶಯಗಳನ್ನು ಯುವ ಜನರಿಗೆ ಹಾಗೂ ಮನೆ ಮನಗಳಿಗೆ ತಲುಪಿಸುವ ಅನಿವಾರ್ಯತೆಯಿದೆ ಎಂದರು. ಡಾ. ಶರಣಪ್ಪ ಸೈದಾಪೂರ ಹಾಗೂ ಅಶ್ವಿನಿ ಮದನಕರ್ ಮಾತನಾಡಿದರು.
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ.ಪೋತೆಯವರು ‘ಸಂವಿಧಾನ ಓದು’ ಮತ್ತು ‘ಎಲ್ಲರ ಅಂಬೇಡ್ಕರ್’ ಅವರ 150 ಪುಸ್ತಕಗಳನ್ನು ಉಚಿತವಾಗಿ ಜಾಥಾ ಕಾರ್ಯಕ್ರಮಕ್ಕಾಗಿ ನೀಡಿದ್ದಾರೆ. ಓದುವ ಸಂಸ್ಕøತಿ ಹೆಚ್ಚಾಗಬೇಕು. ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗದವರು ಪುಸ್ತಕಗಳನ್ನು ಓದಿದಾಗ ಮಾತ್ರ ದೇಶವನ್ನು ಆಳಲು ಸಾಧ್ಯ. ಅದಕ್ಕಾಗಿ ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಲು ಪ್ರೋತ್ಸಾಹದಾಯಕವಾಗಿ ನೀಡಿರುತ್ತಾರೆ.