ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರರ ಜಯಂತಿ
ಬೀದರ್:ಏ.14: ಇಂದು ನಗರದ ಪ್ರತಿಷ್ಠಿತ ಬಿ.ವಿ ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಭಾರತ ರತ್ನ, ಮಹಾಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರರ 133ನೇಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಪ್ರಾಚಾರ್ಯರಾದ ಡಾ. ಪಿ ವಿಠ್ಠಲ್ ರೆಡ್ಡಿ ಅವರು ಡಾ.ಬಿ.ಆರ್. ಅಂಬೇಡ್ಕರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಭಾರತೀಯ ಸಮಾಜದಲ್ಲಿನ ಜಾತಿ, ಶೋಷಣೆ, ಅನ್ಯಾಯವನ್ನು ಸಹಿಸಿಕೊಂಡು ಬರುತ್ತಿರುವ ಹಿಂದುಳಿದ ವರ್ಗದವರ ಜೀವನವನ್ನು ಸುಭದ್ರಗೊಳಿಸಲು ಹಾಗೂ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ಕಲ್ಪಿಸಲು ನಿರಂತರ ಹೋರಾಟ ಮಾಡುತ್ತಾ ಶಿಕ್ಷಣದ ಮಹತ್ವವನ್ನೂ ಸಾರುತ್ತಾ ಭವ್ಯವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿರುವ ಈ ಮಹಾತ್ಮರ ಜಯಂತಿಯ ಆಚರಣೆ ಮಾಡುವುದು ಸಂಭ್ರಮದ ದಿನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಅನಿಲಕುಮಾರ್ ಆಣದೂರೆ ಉಪ ಪ್ರಾಂಶುಪಾಲರು ಮಾತನಾಡುತ್ತಾ ಅಂಬೇಡ್ಕರರು ತಮ್ಮ ಇಡೀ ಜೀವನವೇ ಸುಂದರ ಸಮ ಸಮಾಜವನ್ನು ರೂಪಿಸುವ ಉದ್ದೇಶದಿಂದ ಸವೆಸಿದ್ದಾರೆ ಅವರ ಹೋರಾಟದ ಫಲವೇ ಇಂದಿನ ಭಾರತ ವಿಶ್ವ ಮಟ್ಟದಲ್ಲಿ ಸದೃಢವಾಗಿ ನೆಲೆಗೊಳ್ಳಲು ಸಾಧ್ಯವಾಗಿದೆ ಎಂದು ಹೇಳುತ್ತಾ ಅವರ ಜೀವನದಲ್ಲಿ ನಡೆದಿರುವ ಅನೇಕ ಘಟನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡುರು.
ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸಾಮ್ರಾಟ್ ಪಾಯದ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಡಾ. ಶ್ವೇತಾ ನಾಯಕ್, ಕಚೇರಿ ಅಧೀಕ್ಷಕರಾದ ಶ್ರೀ ಸುಜೀತಕುಮಾರ ಪಂಢರಪುರ, ನೂರ ಪಾಶ, ಪ್ರವೀಣಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅತಿಥಿಗಳನ್ನು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಡಾ. ಪೂಜಾ ಸೂರ್ಯವಂಶಿಯವರು ಸ್ವಾಗತಿಸಿದರೆ, ಶ್ರೀ ಮಾರುತಿ ಭೀಮಣ್ಣ ಅವರು ನಿರೂಪಿಸಿ ವಂದಿಸಿದರು.