ಭಾರತ ಕಂಡ ಶ್ರೇಷ್ಠ ಇಂಜಿನಿಯರ್ ವಿಶ್ವೇಶ್ವರಯ್ಯ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.20: ನೀರು ಮತ್ತು ನೀರಾವರಿ ಮಹತ್ವ ಅರಿತು ಅದರ ಸಂಗ್ರಹಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ತೊಡಗಿದ ಶ್ರೇಷ್ಠ ಅಭಿಯಂತರ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್.ಎಂ.ವಿ.ಅವರ 164ನೇ ಜಯಂತ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಅಭಿಯಂತರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪ ನಮನಸಲ್ಲಿಸಿ ಮಾತು ಮುಂದುವರಿಸಿದ ಅವರು ಕೃಷ್ಣರಾಜ ಸಾಗರ ಅಣೆಕಟ್ಟು, ತುಂಗಭದ್ರಾ ಅಣೆಕಟ್ಟು, ಹೈದರಾಬಾದಿನ ಮೂಸಿ ಅಣೆಕಟ್ಟು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಕನ್ನಡ ಸಾಹಿತ್ಯ ಪರಿಷತ್ತು, ಸ್ಟೇಟ್ ಬ್ಯಾಂಕ್ ಮೈಸೂರು, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇವರು ಮೈಸೂರಿನ ದಿವಾನರಾಗಿದ್ದ ಸಂದರ್ಭದಲ್ಲಿ ನಿರ್ಮಾಣಗೊಂಡಿವೆ.
ಇವರು ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಮಹತ್ವದ ಸೇವೆ ಸಲ್ಲಿಸಿ ಪ್ರಶಂಸೆ ಹಾಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಆದ್ದರಿಂದ ವಿದ್ಯಾರ್ಥಿಗಳು ಶತಾಯುಷಿ ಸರ್. ಎಂ.ವಿ.ಅವರ ಜೀವನ ಸಾಧನೆಗಳನ್ನು ಅರಿತು ಅವರಂತೆ ಮೇಧಾವಿಗಳಾಗಬೇಕೆಂದು ಹಾರೈಸಿದರು.
ನಲಿಕಲಿ ಶಿಕ್ಷಕಿ ಕೆ.ಸುಮತಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಎಂ.ವಿ.ಅವರಂತೆ ಪ್ರತಿಭಾವಂತರಾಗಬೇಕೆಂದು ಹೇಳಿದರು.
ಶಿಕ್ಷಕರಾದ ಶ್ವೇತಾ, ಉಮ್ಮೆಹಾನಿ, ಶಶಮ್ಮ, ರಾಮಾಂಜನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕೆ.ಎಸ್. ಅನುಷ ಮುಂತಾದವರು ಉಪಸ್ಥಿತರಿದ್ದರು.