ಬಿಜೆಪಿ ಜೆಡಿಎಸ್ ಹೊಂದಾಣಿಕೆ ಅಂದೇ ಆಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ
ವಿಜಯಪುರ, ಏ. ೧೪: ಈಗಿನಂತೆ ಒಂದು ವರ್ಷದ ಮೊದಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹೊಂದಾಣಿಕೆಯಾಗಿದ್ದರೆ ಈಗಿನ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುತ್ತಿರಲಿಲ್ಲ ಹಾಗೂ ಎರಡು ಪಕ್ಷಗಳ ಕಾರ್ಯಕರ್ತರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ಜೆಡಿಎಸ್ ನ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಅವರು ಶುಕ್ರವಾರದಂದು ವಿಜಯಪುರ ಹೋಬಳಿ ಗೊಡ್ಲು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಂಯುಕ್ತ ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಬಹಳ ವಿಶಾಲವಾಗಿ ದೊಡ್ಡದಿದ್ದು ಎಲ್ಲೆಡೆ ಅಭ್ಯರ್ಥಿಗಳನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸಲು ಸಾಧ್ಯವಾಗದ ಕಾರಣ ಸ್ಥಳೀಯ ಎರಡು ಪಕ್ಷಗಳ ಮುಖಂಡರುಗಳೇ ಪ್ರತಿ ಗ್ರಾಮಗಳಲ್ಲಿಯೂ ಪ್ರತಿ ಬೂತ್ ಮಟ್ಟದಲ್ಲಿಯೂ ಕಾರ್ಯಕ್ರಮಗಳನ್ನು ನಿರ್ವಹಿಸಿ ಮತದಾರರ ಮನವೊಲಿಸಿ ಮತಗಳನ್ನು ಹಾಕಿಸುವಂಥ ಕೆಲಸ ಆಗಬೇಕೆಂದು ತಿಳಿಸಿದರು.
ಚುನಾವಣೆ ನಡೆದು ಫಲಿತಾಂಶ ಬಂದ ನಂತರ ಒಬ್ಬರ ಮೇಲೆ ಒಬ್ಬರು ಹಾಗೆ ಆಗಬೇಕಿತ್ತು ಈಗಾಗಬೇಕಿತ್ತು ಎಂದು ಗೂಬೆ ಕೂರಿಸುವಂತಹ ಕೆಲಸ ಬೇಡ ಯಾವುದೇ ಪಕ್ಷದಲ್ಲಿ ಯಾವುದೇ ವ್ಯತ್ಯಾಸಗಳಿದ್ದರೂ ಸಹ ಜೆಡಿಎಸ್ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷರು ಹಾಗೂ ಮುಖಂಡರುಗಳ ಬಳಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷರಾದ ಕಾರಳ್ಳಿ ಮುನೇಗೌಡರವರು ಮಾತನಾಡುತ್ತಾ, ಕಾರ್ಯಕರ್ತರು ಹಾಗೂ ಮುಖಂಡರುಗಳು ಬೂತ್ ಮಟ್ಟದಲ್ಲಿ “ಕಾರ್ಯವಾಸಿ ಕತ್ತೆ ಕಾಲು ಹಿಡಿ” ಎಂಬ ಗಾದೆ ತಪ್ಪಲ್ಲ ಎಂಬಂತೆ ಹೇಗಾದರೂ ಸರಿಯೇ ಎನ್ ಡಿ ಎ ಅಭ್ಯರ್ಥಿಗೆ ಮತ ಹಾಕಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ಜಿ ಚಂದ್ರಣ್ಣ ಮಾತನಾಡಿ,ಇಂದಿನಿಂದಲೇ ಇರುವ ಅಲ್ಪಸಮಯದಲ್ಲಿಯೇ ಅಭ್ಯರ್ಥಿ ಕೆ ಸುಧಾಕರ್ ರವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಬೇಕೆಂದು ತಿಳಿಸಿದರು.
ಮಾಜಿ ಶಾಸಕ ಪಿಳ್ಳಮುನಿಶ್ಯಾಮಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಮತದಾನ ಮಾಡುವ ಸಂದರ್ಭದಲ್ಲಿ ಜೆ.ಡಿ.ಎಸ್ ಕಾರ್ಯಕರ್ತರು ತೆನೆ ಹೊತ್ತ ಮಹಿಳೆಯ ಚಿಹ್ನೆಗಾಗಿ ಹುಡುಕುವಂತಹ ತಪ್ಪು ಮಾಡದೇ, ನಾಲ್ಕನೇ ಸಂಖ್ಯೆಯ ಕಮಲದ ಚಿಹ್ನೆ ಇರುವ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್‌ರವರಿಗೆ ಮತ ನೀಡುವಂತೆ ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಯಪ ಮಾಜಿ ಅಧ್ಯಕ್ಷ ಎಸ್.ಎಲ್.ಎನ್ ಅಶ್ವಥ್ ನಾರಾಯಣ್, ಜೆಡಿಎಸ್ ಕಾರ್ಯದರ್ಶಿ ರವೀಂದ್ರ,ಮುಖಂಡರಾದ ಚಿ.ಮಾ ಸುಧಾಕರ್, ಬಿಜೆಪಿ ತಾಲೂಕು ಅಧ್ಯಕ್ಷ ಸುನಿಲ್ ಸುಂದರೇಶ್, ಕಾರ್ಯದರ್ಶಿ ರವಿಕುಮಾರ್, ಮಂಜುನಾಥ್, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗದೀಶ್, ಉಪಾಧ್ಯಕ್ಷರಾದ ಭಾಗ್ಯಮ್ಮ, ಮಾಜಿ ಅಧ್ಯಕ್ಷರುಗಳಾದ ಚೇತನ್ ಗೌಡ, ನಾರಾಯಣಸ್ವಾಮಿ, ಬಮೂಲ್‌ನ ಮಾಜಿ ನಿರ್ದೇಶಕರುಗಳಾದ ದಂಡಿಗನಹಳ್ಳಿ ನಾರಾಯಣಸ್ವಾಮಿ, ಹಾಲಿ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್, ಹಾಪ್ ಕಾಮ್ಸ್ ಮಾಜಿ ನಿರ್ದೇಶಕರಾದ ಹುರಳುಗುರ್ಕಿ ಶ್ರೀನಿವಾಸ್, ಬಿಜೆಪಿ ವಿಜಯಪುರ ಹೋಬಳಿ ಅಧ್ಯಕ್ಷ ಅನಿಲ್, ಜೆಡಿಎಸ್ ನ ಹೋಬಳಿ ಅಧ್ಯಕ್ಷರಾದ ಪುರ ಕೃಷ್ಣಪ್ಪ, ಕಾರ್ಯದರ್ಶಿ ಕಲ್ಯಾಣಕುಮಾರ್ ಬಾಬು, ಲಕ್ಷ್ಮಣ, ಬುಳ್ಳಳ್ಳಿ ರಾಜಪ್ಪ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಮುನ್ನ ವಿಜಯಪುರ ಹೋಬಳಿ ಭಟ್ರೇನಹಳ್ಳಿಯ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ, ಕೆ ಸುಧಾಕರ್ ರವರ ಪರವಾಗಿ ಪ್ರಚಾರ ಆರಂಭಿಸಲು ವಿಶೇಷ ಪೂಜೆ ಏರ್ಪಡಿಸಲಾಗಿತ್ತು.