ಪಕ್ಷಬೇಧ ಮರೆತು ಜನರಿಂದ ಬೆಂಬಲ: ಡಿಕೆ ಸುರೇಶ್
ರಾಮನಗರ,ಏ.೧೪- ಲೋಕಸಭಾ ವ್ಯಾಪ್ತಿಯ ೮ ಕ್ಷೇತ್ರಗಳಲ್ಲಿ ಪಕ್ಷಬೇಧ ಮರೆತು ಜನರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಚುನಾವಣೆಯಲ್ಲಿ ಕಾರ್ಯಕರ್ತರು ಉತ್ಸುಕತೆಯಿಂದ ಮತ ಕೇಳಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮುಖಂಡರಿಗೆ ಕಿವಿ ಮಾತು ಹೇಳಿದರು.
ನಗರದ ಹೊರವಲಯದಲ್ಲಿ ನಡೆದ ಕೈಲಾಂಚ, ಕಸಬಾ ಹೋಬಳಿಗಳ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮೂರು ಬಾರಿ ನನಗೆ ಪಕ್ಷಬೇದ ಮರೆತು ಚುನಾವಣೆಯಲ್ಲಿ ಆರ್ಶೀವಾದ ಮಾಡಿದ್ದೀರಿ. ಮತ್ತೆ ಎದುರಾಗಿರುವ ಈ ಚುನಾವಣೆಯಲ್ಲಿ ನನಗೆ ಮತ್ತೆ ಆರ್ಶೀವಾದ ಬೇಕಿದೆ. ನನ್ನ ಚುನಾವಣೆ ಮಾಡುವವರು ಪಕ್ಷದ ಮುಖಂಡರು, ಕಾರ್ಯಕರ್ತರುಗಳಾದ ನೀವುಗಳು, ಪ್ರತಿ ಮನೆ ಮನೆಗೆ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ನಾನು ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ತಿಳಿಸಿ ಮತಯಾಚನೆ ಮಾಡಿ ಎಂದರು.
ಕಾಂಗ್ರೆಸ್ ಮುಖಂಡರು ಮತದಾರರಿಗೆ ನಮ್ಮ ಸರ್ಕಾರ ಕೊಟ್ಟಿರುವ ಕಾರ್ಯಕ್ರಮ ಮತ್ತು ನಮ್ಮ ಅಭಿವೃದ್ಧಿ ಹೇಳುತ್ತಿಲ್ಲ. ಆದರೆ ಬಿಜೆಪಿ ಜೆಡಿಎಸ್‌ನವರು ಕೊಡದಿರುವುದನ್ನು ಹೇಳುತ್ತಾ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬರಲು ಬೇರು ಮಟ್ದದಲ್ಲಿ ಪಕ್ಷ ಸಂಘಟಿಸಿರುವವರು ಕಾರ್ಯಕರ್ತರಾದ ನೀವುಗಳು. ನಾನು ಕಾರ್ಯಕರ್ತರಿಗೆ ಅವಮಾನ ಮಾಡುವ ರೀತಿಯಲ್ಲಿ ಕೆಲಸ ಮಾಡಿಲ್ಲ. ರಾಜ್ಯ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ಜಾತಿ ಧರ್ಮ ಎನ್ನದೆ ಪಕ್ಷಾತೀತವಾಗಿ ೯೪% ಜನರಿಗೆ ತಲುಪಿವೆ ಎಂದರು.
೧೨೦ ಕೋಟಿ ಅನುದಾನವನ್ನು ಕಸಬಾ ಕೈಲಾಂಚ ಹೋಬಳಿ ಅಭಿವೃದ್ಧಿಗೆ ತರಲಾಗಿದೆ. ಮಂಚನಬೆಲೆ, ಸುಗ್ಗನಹಳ್ಳಿ, ಹರೀಸಂದ್ರ, ಗುನ್ನೂರು, ವಡ್ಡರಹಳ್ಳಿ ಬಳಿ ಅರ್ಕಾವತಿ ನದಿಗೆ ಸೇತುವೆ, ಜಿಲ್ಲಾಸ್ಪತ್ರೆ, ಕೆರೆ ತುಂಬಿಸುವ ಯೋಜನೆ, ಕೈಲಾಂಚ ಕೆರೆಗಳು, ಕಸಬಾದ ೬೦ ಕೆರೆಗಳನ್ನು ತುಂಬಿಸಲು ಕ್ರಮ ವಹಿಸಿದ್ದೇನೆ. ರೈತರ ಮೇಲಿನ ಪ್ರೀತಿ ಕಾಳಜಿಯಿಂದ ಕೃಷಿ ಕಾರ್ಯಕ್ಕೆ ೧೦ ಸಾವಿರ ಟ್ರಾನ್ಸ್ ಪಾರ್ಮರ್‌ಗಳನ್ನು ಅಳವಡಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ೩ ಸಾವಿರ ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲ ವೃದ್ದಿಯಾಗಿದೆ. ಆ ಮೂಲಕ ಜಿಲ್ಲೆಯ ಪ್ರತಿ ಮನೆಗೂ ಒಂದಲ್ಲಾ ಒಂದು ಯೋಜನೆ ತಲುಪಿಸಿದ್ದು ಅಭಿವೃದ್ದಿ ಪರ್ವವೇ ನಡೆದಿದೆ. ಇದನ್ನು ಜನರಿಗೆ ಹೇಳಿ ನಮ್ಮಅಭ್ಯರ್ಥಿ ಕೆಲಸ ಮಾಡಿದ್ದಾರೆ. ಆಗಾಗಿ ಕೂಲಿ ಕೊಡಿಸುವ ಕೆಲಸ ಮಾಡಿ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರದಲ್ಲಿಯೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕೆಂಗಲ್ ಬಳಿ ಕೇಂದ್ರಿಯ ವಿದ್ಯಾಲಯ, ಕನಕಪುರದಲ್ಲಿ ಆದರ್ಸ ವಿದ್ಯಾಲಯ ಮಾಡಲು ಹಿಂದೆ ಪ್ರಧಾನಮಂತ್ರಿ, ಮುಖ್ಯಮಂತ್ರಿಯಾದವರಿಗೆ ಗೊತ್ತಿರಲಿಲ್ಲವೇ. ಆ ಕೆಲಸವನ್ನು ನಾನು ಸಂಸದನಾದ ಮೇಲೆ ಅವುಗಳ ನಿರ್ಮಾಣ ಮಾಡಿ ಬಡವರ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟವನು ಈ ಸುರೇಶ್ ಎಂದರು. ನಾನು ಜನರ ಋಣ ತೀರಿಸುವ ಕಾಳಜಿ ಇಟ್ಟುಕೊಂಡಿದ್ದೇನೆ. ಆಗಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ನನಗೆ ಕೂಲಿ ಕೇಳುತ್ತಿದ್ದೇನೆ ಎಂದರು.
ಎರಡು ಕಣ್ಣುಗಳು ಮಾಯ : ಹಾಸನ ಜಿಲ್ಲೆಯವರು ಸೋಲಿಸಿದ ಮೇಲೆ ರಾಮನಗರದವರು ಓಟು ಹಾಕಿ ಸಂಸದರಾಗಿ ಮಾಡಿದಿರಿ, ನಂತರ ಜಿಲ್ಲೆಯಲ್ಲಿದ್ದ ಎರಡು ಕಣ್ಣುಗಳು ಈಗ ಒಂದು ಕಣ್ಣು ಹೋಗಿ ಐದು ವರ್ಷವಾಯಿತು. ಈಗ ಮತ್ತೊಂದು ಕಣ್ಣು ಬೇರೆ ಜಿಲ್ಲೆಗೆ ಹೋಗಿ ಆಯಿತು ಎಂದು ಕುಮಾರಸ್ವಾಮಿ ಹೆಸರನ್ನೇಳದೆ ಕಿಡಿಕಾರಿದ ಅವರು ರಾಮನಗರ ಜಿಲ್ಲೆಯನ್ನು ಬಿಟ್ಟು ಬೇರೆ ಜಿಲ್ಲೆಗೆ ಹೋದ ಮೇಲೆ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ಮಾಡಿರುವ ಅಪಮಾನವಲ್ಲವೇ, ಆ ಪಕ್ಷದ ಕಾರ್ಯಕರ್ತರಿಗೆ ತಿಳಿ ಹೇಳಿ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮುಖ್ಯ ಎಂದು ಜೆಡಿಎಸ್ ಮುಖಂಡರಿಗೆ ನೈಜತೆಯನ್ನು ತಿಳಿಸಿ ಮನವಿ ಮಾಡಿ ಅಭಿವೃದ್ಧಿ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಡಿ ಎಂದು ಕೇಳಿ ಮನವೊಲಿಸಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಜೆಡಿಎಸ್‌ನಲ್ಲಿ ನಾಯಕತ್ವ ಬೆಳೆಸಲು ಯಾರು ಸಿಗಲಿಲ್ಲವೇ, ಮಾವನವರಿಗೆ ಸ್ಪರ್ದೆಗೆ ಅವಕಾಸ ನೀಡಿ ಕಮಲದ ಗುರ್ತಿನಲ್ಲಿ ಸ್ಪರ್ದೆ ಮಾಡಿಸಿದ್ದೀರಿ, ಬಿಜೆಪಿ ಜೊತೆ ಸ್ನೇಹ ಮಾಡಿದ್ದೀರಿ, ಮಂಡ್ಯ ಕ್ಷೇತ್ರದಲ್ಲಿ ಮಾದೇಗೌಡ, ನಾಗೇಗೌಡರಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದವರು, ಈಗ. ಚುನಾವಣೆ ಸಮಯದಲ್ಲಿ ಅವರುಗಳ ಸಮಾಧಿಗೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರ ಕಾಲೆಳೆದರು.
ಜಿಲ್ಲೆಗೆ ಕೇಂದ್ರ ಸಚಿವ ಅಮಿತ್ ಷಾ ಬರಲಿ, ಕೇಂದ್ರದಿಂದ ಬರಗಾಲದ ಹಣ ನೀಡಲಾಗದವರು ಜಿಲ್ಲೆಗೆ ಬಂದರೆ ಬರಲಿ, ಕರ್ನಾಟಕದವರಿಗೆ ಅನ್ಯಾಯ ಮಾಡಿ ಯಾವ ಮುಖ ಹೊತ್ತು ಜನರ ಬಳಿ ಮತ ಕೇಳುತ್ತೀರಿ ಎಂದು ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ದ ಹರಿಹಾಯ್ದರು.
ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ,ಕೈಲಾಂಚ ಹೋಬಳಿ ಕೆರೆ ತುಂಬಿಸುವುದು, ಕಾಳೇಗೌಡನ ದೊಡ್ಡಿ ಏತ ನೀರಾವರಿ ಯೋಜನೆ, ರೈತರಿಗೆ ಎಚ್.ವಿ.ಡಿ.ಎಸ್ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಹೋರಾಟ ಮಾಡುತ್ತಿರುವ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ದೈರ್ಯವಾಗಿ ಮುಖಂಡರು ಮತಯಾಚನೆ ಮಾಡಬಹುದಗಿದೆ. ಸರ್ಕಾರದ ೫ ಗ್ಯಾರಂಟಿಗಳನ್ನು ಮತ್ತು ಜನರಿಗೆ ತಿಳಿಸುತ್ತಾ ಜನರ ಮನಸ್ಸನ್ನು ಗೆಲ್ಲುವ ಕೆಲಸ ಮಾಡಿದರೆ ಸಾಕು, ಮುಖಂಡರು ಈ ನಿಟ್ಟಿನಲ್ಲಿ ತಮ್ಮ ತಮ್ಮ ಬೂತ್‌ಗಳಲ್ಲಿ ಹೆಚ್ಚು ಮತ ಕೊಡಿಸಿ ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ಕೆಪಿಸಿಸಿ ಉಪಾಧ್ಯಕ್ಷ ಸಯ್ಯದ್ ಜಿಯಾವುಲ್ಲಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ದೀಪಾಮುನಿರಾಜು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಮುಖಂಡರಾದ ಕೆ.ರಮೇಶ್, ಕೆ.ಶೇಷಾದ್ರಿ (ಶಶಿ), ಆರ್.ದೊಡ್ಡವೀರಯ್ಯ, ಪಿ.ನಾಗರಾಜು, ಕೆ.ಶೇಷಾದ್ರಿ ಬ್ಲಾಕ್ ಅಧ್ಯಕ್ಷರುಗಳಾದ ವಿ.ಎಚ್.ರಾಜು, ಎ.ಬಿ.ಚೇತನ್ ಕುಮಾರ್ ಸೇರಿದಂತೆ ಹಲವರು ಇದ್ದರು. ಈ ವೇಳೆ ಜೆಡಿಎಸ್ ಬಿಜೆಪಿ ತೊರೆದು ಡಿ.ಕೆ.ಸುರೇಶ್ ಸಮ್ಮುಖದದಲ್ಲಿ ಹಲವರು ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಸೇರ್ಪಡೆ : ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ನಾಯಕತ್ವ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಬಿಜೆಪಿ ಪಕ್ಷಗಳ ಹಲವು ಮುಖಂಡರುಗಳಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿದ್ದೇಗೌಡ (ರವಿ), ಗ್ರಾಪಂ ಮಾಜಿ ಸದಸ್ಯ ದಾಸರಹಳ್ಳಿ ಕೃಷ್ಣಪ್ಪ, ಶ್ರೀನಿವಾಸ್‌ರಾವ್ (ಬಾಬು), ಹುಣಸನಹಳ್ಳಿ ಶಿವಲಿಂಗಣ್ಣ, ಜವಳಗೆರೆದೊಡ್ಡಿ ಪ್ರಕಾಶ, ಹನುಮಂತೇ ಗೌಡನದೊಡ್ಡಿ ಚಂದ್ರು, ಮೊಟ್ಟೆದೊಡ್ಡಿ ಕುಮಾರ್, ಸುಜಯ್, ಕೂನಗಲ್ ವೆಂಕಟಪ್ಪ, ತಿಬ್ಬೇಗೌಡನದೊಡ್ಡಿ ಟಿ.ರಮೇಶ್, ಹಾರ್ಡ್ವೇರ್‌ಗಿರೀಶ್ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಹುಣಸನಹಳ್ಳಿ ಗ್ರಾಪಂ ಅಧ್ಯಕ್ಷ ಅಚ್ಚಲು ಪುಟ್ಟಸ್ವಾಮಿ, ಯುವ ಮುಖಂಡ ವಾಸು, ಪ್ರಾಣೇಶ್, ರಘು ಮತ್ತಿತರರು ಇದ್ದರು.