ಏ.೧೭ ಕಾಂಗ್ರೆಸ್‌ನಿಂದ ಬೃಹತ್ ಸಮಾವೇಶ
ಮಾಲೂರು ಏ.೧೪: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.೧೭ರಂದು ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಕೆ.ವಿ.ಗೌತಮ್ ಅವರ ಪರವಾಗಿ ಮತಯಾಚನೆ ಮಾಡಲು ಬಹಿರಂಗ ಸಭೆಗೆ ೫೦,೦೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಜಿ ಉಪಾಧ್ಯಕ್ಷ ಸಂಸದ ರಾಹುಲ್ ಗಾಂಧಿ ಆಗಮಿಸಿ ಬೃಹತ್ ಸಮಾವೇಶದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡುವ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯ ನಡೆಯುವ ಮಾಲೂರು ಹೊಸಕೋಟೆ ರಸ್ತೆಯ ಇರಬನಹಳ್ಳಿ ಗೇಟ್ ಬಳಿ ಇರುವ ಸ್ಥಳವನ್ನು ವೀಕ್ಷಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ ಜಾತ್ಯತೀತ ಪಕ್ಷವಾಗಿದೆ. ಎಲ್ಲಾ ಜಾತಿ ಜನಾಂಗದವರು ಧರ್ಮದವರನ್ನು ಸಹೋದರತೆಯಿಂದ ಒಗ್ಗಟ್ಟಾಗಿ ಕರೆದೊಯ್ಯುವ ಕೆಲಸ ಮಾಡಲಾಗುತ್ತಿದೆ. ಕೇಂದ್ರದಲ್ಲಿ ೬೦ ವರ್ಷಗಳ ಕಾಲ ಆಡಳಿತವನ್ನು ನಟಿಸಿರುವ ಕಾಂಗ್ರೆಸ್ ಪಕ್ಷವು ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಅಲ್ಲದೆ ದೇಶದ ಅಭಿವೃದ್ಧಿಗೆ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕಳೆದ ೧೦ ತಿಂಗಳ ಹಿಂದೆ ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವು ನುಡಿದಂತೆ ನಡೆದಿದೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ೫ ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳಿಸಿ ಜನರ ಕಷ್ಟ ಸುಖಗಳಿಗೆ ನೆರವು ನೀಡಿದೆ ಗ್ಯಾರಂಟಿ ಯೋಜನೆಗಳ ಪಡೆಯುತ್ತಿರುವ ಫಲಾನುಭವಿಗಳು ಹಾಗೂ ಯುವಕ ಯುವತಿಯರು ದೇಶದಲ್ಲಿ ಸುಭದ್ರ ಸರ್ಕಾರ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಂಸದರನ್ನು ಗೆಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ ಜನರ ಪರವಾದ ಸರ್ಕಾರವಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ ೬೫,೦೦೦ ಕೋಟಿ ಖರ್ಚು ಮಾಡಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿಯನ್ನು ಸಹಿಸದ ಜೆಡಿಎಸ್ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡಲು ಯಾವುದೇ ರೀತಿಯ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿದ್ದು ಯಾವುದೇ ರೀತಿಯ ಗೊಂದಲಗಳಿಲ್ಲ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಅವರ ಪರವಾಗಿ ಮತಯಾಚನೆ ನಡೆಸಲು ಮಾಲೂರು ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ ೧೭ರಂದು ಮಧ್ಯಾಹ್ನ ೩ ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪಾಧ್ಯಕ್ಷ ಸಂಸದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸೇರಿದಂತೆ ಹಲವಾರು ಸಚಿವರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ೮ ವಿಧಾನಸಭಾ ಕ್ಷೇತ್ರಗಳಿಂದ ೫೦,೦೦೦ಕ್ಕೂ ಹೆಚ್ಚು ಸಾರ್ವಜನಿಕರು ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಉತ್ತಮ ಜನಪದ ಆಡಳಿತವನ್ನು ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರವು ರಾಜ್ಯಾದ್ಯಂತ ಬಲಿಷ್ಠವಾಗಿದೆ. ಏ.೨೬ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವು ಹಮ್ಮಿಕೊಂಡಿರುವ ಪ್ರಚಾರ ಸಭೆಯ ಸಮಾವೇಶದಲ್ಲಿ ಎಐಸಿಸಿ ಮಾಜಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ೫೦,೦೦೦ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ ವಿ ಗೌತಮ್ ಅವರು ಗೆಲುವು ಸಾಧಿಸಲಿದ್ದಾರೆ ಎಂದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಕೆಪಿಸಿಸಿ ಸದಸ್ಯರಾದ ಅಂಜನಿ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ.ಮಧುಸೂದನ್, ಎಚ್.ಎಂ.ವಿಜಯನರಸಿಂಹ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಯೀಂ ಉಲ್ಲಾ ಖಾನ್, ಸಹಾಯಕ ಚುನಾವಣೆ ಅಧಿಕಾರಿ ಕುಮಾರ ಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ವಸಂತ್, ಇನ್ನಿತರರು ಹಾಜರಿದ್ದರು.