ಸೋಲಿನ ಭಯದಿಂದ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಏ.14:- ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಅಂಗವಾಗಿ ಪಿರಿಯಾಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ-2 ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಗಳಿಗೆ ಸ್ವತಂತ್ರವಾಗಿ ಗೆಲ್ಲುವ ಸಾಮಥ್ರ್ಯವಿಲ್ಲದೆ ಮೋದಿಗಾಗಿ ಮತ ನೀಡಿ ಎಂದು ಅಂಗಲಾಚುತ್ತಿದ್ದಾರೆ ಎಂದು ಜರಿದರು. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಹೊಂದಾಣಿಕೆಯನ್ನು ನೋಡಿದರೆ ನಾಯಿ ಹಸಿದಿತ್ತು ಅನ್ನ ಹಳಸಿತ್ತು ಎಂಬ ಗಾದೆ ನೆನಪಿಗೆ ಬರುತ್ತಿದ್ದು ಜೆಡಿಎಸ್ ನ ಪರಿಸ್ಥಿತಿ ಈ ಸ್ಥಿತಿಗೆ ತಲುಪಿದೆ ಎಂದರು. ದೇವೇಗೌಡರು ಪಿಎಂ ಆಗಿದ್ದು ಕಾಂಗ್ರೆಸ್ ಪಕ್ಷದಿಂದ, ಕುಮಾರಸ್ವಾಮಿ ಸಿಎಂ ಆಗಿದ್ದು ಕಾಂಗ್ರೆಸ್ ಪಕ್ಷದಿಂದ, ಆದರೆ ಈಗ ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಜಾತ್ಯಾತೀತ ನಿಲುವನ್ನು ಕಿತ್ತೆಸೆದು ಕೋಮುವಾದಿಗಳೊಂದಿಗೆ ಕೈಜೋಡಿಸಿದೆ ಎಂದು ಕಟಕಿಯಾಡಿದರು. ಸೆಕ್ಯುಲರ್ ಹೆಸರಿಟ್ಟುಕೊಂಡು ಬಿಜೆಪಿ ಜತೆ ಬೆರೆತಿರುವ ಜೆಡಿಎಸ್ ಗೆ ಮಾನ ಮರ್ಯಾದೆ ಇದೆಯಾ? ಕೇವಲ ಕುಟುಂಬದ ಹಿತಾಸಕ್ತಿಗಾಗಿ ಯಾರ ಜತೆಗೆ ಬೇಕಾದರೂ ಹೋಗಲು ಜೆಡಿಎಸ್ ರೆಡಿ ಆಗಿ ಬಿಡ್ತದೆ, ಯಾವುದೇ ಸಿದ್ದಾಂತ ಇಲ್ಲ, ಜನಪರವಾದ ಬದ್ಧತೆ ಇಲ್ಲ ಎಂದು ಟೀಕಿಸಿದರು.
ನರೇಂದ್ರ ಮೋದಿಯವರೇ ನೀವು ಒಂದಲ್ಲಾ-ಎರಡಲ್ಲಾ ಹತ್ತು ವರ್ಷ ಪ್ರಧಾನಿ ಆಗಿದ್ರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಲಿಲ್ವಲ್ಲಾ ಯಾಕೆ ಸ್ವಾಮಿ, ಇದು ನ್ಯಾಯನಾ ಸ್ವಾಮಿ ಎಂದು ಪ್ರಶ್ನಿಸಿದರು. ನೀವು ಕೊಟ್ಟ ಮಾತನ್ನಂತೂ ಉಳಿಸಿಕೊಳ್ಳಲಿಲ್ಲ. ಹೋಗ್ಲಿ, ಈ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಶ್ರಮಿಕರು, ಸಣ್ಣ-ಮಧ್ಯಮ ಉದ್ಯಮಿಗಳಿಗೆ, ಯುವ ಜನರ ಭವಿಷ್ಯಕ್ಕೆ ಒಂದೇ ಒಂದು, ಬರೀ ಒಂದೇ ಒಂದು ಕಾರ್ಯಕ್ರಮವನ್ನೂ ಸಮರ್ಪಕವಾಗಿ ಜಾರಿ ಮಾಡಲಿಲ್ವಲ್ಲಾ ಈ ಚಂದಕ್ಕೆ ಹತ್ತತ್ತು ವರ್ಷ ಪ್ರಧಾನಿಯಾಗಬೇಕಿತ್ತಾ ಮೋದಿಯವರೇ ? ಪ್ರಧಾನಿಯಾಗಿ ಸುಳ್ ಹೇಳ್ಕಂಡು ತಿರುಗಿದ್ರೆ ಭಾರತೀಯರಿಗೆ ನಂಬಿಸಿ ಮೋಸ ಮಾಡಿದಂಗಲ್ವಾ ಸ್ವಾಮಿ, ನಿಮ್ಮನ್ನು ನಂಬಿದವರಿಗೆ ದ್ರೋಹ ಬಗೆದದ್ದು ಸರಿನಾ ಸ್ವಾಮಿ ಎಂದು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದರು. ದೇಶದಲ್ಲಿ ಈಗ ಮೋದಿ ಅಲೆ ಇಲ್ಲ, ಬಿಜೆಪಿಗೆ ತನ್ನ ಶಕ್ತಿ ಮೇಲೆ ಗೆಲ್ಲುವ ಸಾಮಥ್ರ್ಯ ಇಲ್ಲ ಕರ್ನಾಟಕದಲ್ಲಿ ಕಾಂಗ್ರೆಸ್ ಈ ಬಾರಿ ಕನಿಷ್ಟ 20 ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ದೇಶದ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಪ್ರಧಾನಿ ಶ್ರೀಮಂತರ ಆದಾಯವನ್ನು ಮಾತ್ರ ಹೆಚ್ಚು ಮಾಡಿದ್ದಾರೆ ಎಂದು ಆರೋಪಿಸಿದರು. ಈ ಲೋಕಸಭಾ ಚುನಾವಣೆ ಧರ್ಮಯುದ್ಧವಲ್ಲ ಸುಳ್ಳಿಗೂ ಮತ್ತು ಸತ್ಯಕ್ಕೂ ನಡುವಿನ ಅಂತರವನ್ನು ಸಾಬೀತುಪಡಿಸುವ ಚುನಾವಣೆ. ನಾವು ಅಧಿಕಾರ ವಹಿಸಿಕೊಂಡ ಒಂದೇ ಗಂಟೆಯಲ್ಲಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದೆವು, ಐದು ತಿಂಗಳಲ್ಲೇ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದೆವು ಆದರೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯಂತೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡಿದ್ದಾರಾ, ಜನ್ ಧನ್ ಖಾತೆಗೆ ಹಣ ಹಾಕಿದ್ದಾರಾ, ರೈತರ ಆದಾಯ ದುಪ್ಪಟ್ಟುಗೊಳಿಸಿದ್ದಾರಾ ಎಂದು ಪ್ರಶ್ನಿಸಿದರು. ತಮ್ಮ ಅಳಿಯನನ್ನೇ ಬಿಜೆಪಿಯಿಂದ ಟಿಕೆಟ್ ಕೊಡಿಸಿ ನಿಲ್ಲಿಸಿರುವ ಇಂತಹ ಅವಕಾಶವಾದಿಗಳ ವಿರುದ್ಧ ಮತದಾರರು ಹೋರಾಟ ಮಾಡಬೇಕಿದೆ ಎಂದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ತನ್ವೀರ್ ಸೇಟ್, ಸಚಿವರಾದ ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ ಮಾತನಾಡಿದರು. ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರ್ ನಾಥ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಚ್.ಡಿ.ಗಣೇಶ್, ಮುಖಂಡರಾದ ಭಾರತಿಶಂಕರ್, ಮಂಜುನಾಥ್ ಗುಂಡೂರಾವ್, ನಿತಿನ್ ವೆಂಕಟೇಶ್, ಸಂಜಯ್, ಡಿ.ಟಿ.ಸ್ವಾಮಿ, ಪುಟ್ಟರಾಜು ಸೇರಿದಂತೆ ಇತರರು ಇದ್ದರು.