ಪ್ರಸಾದ್ ಭೇಟಿ ಮಾಡಿದ ಸಿದ್ದು ಮಾತುಕತೆ
ಸಂಜೆವಾಣಿ ನ್ಯೂಸ್
ಮೈಸೂರು:ಏ.14:- ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೆಯ ದೋಸ್ತಿ, ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಹಲವು ವರ್ಷಗಳಿಂದ ಸಿದ್ದರಾಮಯ್ಯ, ವಿ.ಶ್ರೀನಿವಾಸಪ್ರಸಾದ್ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಪ್ರಸಾದ್ ಅವರು ರಾಜಕೀಯಕ್ಕೆ ವಿದಾಯ ಹೇಳಿದ್ದರು. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ನಾನು ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಲ್ಲ ಎಂದಿದ್ದರು.
ಶ್ರೀನಿವಾಸಪ್ರಸಾದ್ ಮನೆಗೆ ಹೋಗದಿದ್ದರೆ ದುಬಾರಿ ಬೆಲೆ ತೆತ್ತಬೇಕಾಗುತ್ತದೆ. ಹೀಗಾಗಿ ಅವರನ್ನು ಭೇಟಿ ಮಾಡುವಂತೆ ಸ್ಥಳೀಯ ನಾಯಕರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ಶನಿವಾರ ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸಪ್ರಸಾದ್ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಉಭಯ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸುನೀಲ್ ಬೋಸ್ ಅವರನ್ನು ಬೆಂಬಲಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಹಾಗೂ ಪ್ರಸಾದ್ ದೀರ್ಘಕಾಲದಿಂದ ಸ್ನೇಹಿತರು. ಜೊತೆಯಲ್ಲೇ ರಾಜಕಾರಣ ಮಾಡಿದವರು. ರಾಜಕೀಯವಾಗಿ ನಾನು ಕಾಂಗ್ರೆಸ್‍ನಲ್ಲಿದ್ದೆ, ಅವರು ಬಿಜೆಪಿಗೆ ಹೋಗಿದ್ದರು. ಅವರೀಗ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಅವರ ಆರೋಗ್ಯ ವಿಚಾರಿಸಲು ಭೇಟಿಯಾಗಿದ್ದೇನೆ ಎಂದು ತಿಳಿಸಿದರು.
ಶ್ರೀನಿವಾಸಪ್ರಸಾದ್ ನಾನು ಯಾವ ಪಕ್ಷಕ್ಕೂ ಬೆಂಬಲ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರಿಂದ ರಾಜಕೀಯವಾಗಿ ಬೆಂಬಲ ಕೋರುವುದರಲ್ಲಿ ಅರ್ಥವಿಲ್ಲ. ಜತೆಗೆ ನಾವು ರಾಜಕೀಯವಾಗಿ ಏನನ್ನೂ ಚರ್ಚೆ ಮಾಡಿಲ್ಲ. ಆದರೆ, ಕಾಂಗ್ರೆಸ್ ಬಗ್ಗೆ ಅನುಕಂಪವಿರಲಿ ಎಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.
ಶ್ರೀನಿವಾಸ ಪ್ರಸಾದ್ ಮಾತನಾಡಿ, ಏ.14ರಂದು ಮೈಸೂರಿನಲ್ಲಿ ನಡೆಯಲಿರುವ ಮೋದಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ಕರೆದಿಲ್ಲ, ಕರೆಯುವುದೂ ಇಲ್ಲ. ನಾನು ಹೋಗುವುದೂ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ನನ್ನ ಆರೋಗ್ಯ ವಿಚಾರಸಿದ್ದಾರೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರ ಭೇಟಿ ನನಗೆ ಸಹಜವಾಗಿಯೇ ಖುಷಿ ಕೊಟ್ಟಿದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನು ರಾಜಕೀಯವಾಗಿ ನಿವೃತ್ತಿಯಾಗಿದ್ದೇನೆ ಎಂದು ಹೇಳಿದ್ದೇನೆ. ಚಾಮರಾಜನಗರದಲ್ಲಿ ಕಾಂಗ್ರೆಸ್‍ಗೆ ಉತ್ತಮ ವಾತಾವರಣ ಇದೆ ಎಂದು ಹೇಳಿದರು.
ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಕೆ.ಹರೀಶ್.ಗೌಡ, ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮುಡಾ ಅಧ್ಯಕ್ಷ ಕೆ.ಮರೀಗೌಡ ಸೇರಿದಂತೆ ಹಲವರು ಇದ್ದರು.