ಸಮಗ್ರ ಅಭಿವೃದ್ಧಿಗಾಗಿ ಹೆಚ್.ಡಿ.ಕೆ ಗೆಲ್ಲಿಸಿ:ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.14: ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಕ್ಷೇತ್ರದ ಜನ ಅತೀ ಹೆಚ್ಚಿನ ಮತಗಳ ಅಂತರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಲೋಕಸಭೆಗೆ ಕಳುಹಿಸುವಂತೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಅವರು ತಾಲೂಕಿನ ಬೂಕನಕೆರೆ, ಬಲ್ಲೇನಹಳ್ಳಿ, ಗಂಜೀಗೆರೆ, ವಿಠಲಾಪುರ, ಬಳ್ಳೇಕೆರೆ ಮುಂತಾದ ಕಡೆ ತಮ್ಮ ಬೆಂಬಲಿಗರ ಪಡೆಯೊಂದಿಗೆ ಹೆಚ್.ಡಿ.ಕೆ.ಪರ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಜಿಲ್ಲೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿರುವ ಹೆಚ್.ಡಿ.ಕೆ ಗೆಲುವು ನಿಶ್ಚಿತ. ಆದರೆ ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದ ಜನ ಹೆಚ್.ಡಿ.ಕೆ ಅವರಿಗೆ ಅತೀಹೆಚ್ಚು ಮತಗಳನ್ನು ನೀಡಬೇಕು. ಕಳೆದ ವಿದಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನನಗೆ 22 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಶೀಲನನ್ನಾಗಿ ಮಾಡಿ ಶಾಸನ ಸಭೆಗೆ ಕಳುಹಿಸಿದ್ದೀರಿ. ಇದೀಗ ನಮ್ಮೊಂದಿಗೆ ಬಿಜೆಪಿಗರೂ ಕೈಜೋಡಿಸಿರುವುದರಿಂದ ಕುಮಾರಣ್ಣನಿಗೆ ಕ್ಷೇತ್ರದಲ್ಲಿ 60 ಸಾವಿರಕ್ಕೂ ಅಧಿಕ ಲೀಡ್ ಬರಬೇಕು. ಕುಮಾರಣ್ಣ ಲೋಕಸಭೆಗೆ ಆಯ್ಕೆಯಾಗುವುದರಿಂದ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಎಲ್ಲಾ ಅಭಿವೃದ್ದಿ ಕಾಮಗಾರಿಗಳಿಗೂ ಮರು ಚಾಲನೆ ದೊರಕಲಿದೆ. ತಾಲೂಕಿನಲ್ಲಿ ಈ ಹಿಂದೆ ಅತಿವೃಷ್ಠಿಯಿಂದ ಒಡೆದು ಹೋಗಿರುವ ಕೆರೆಗಳ ಪುನರ್ ನಿರ್ಮಾಣ, ಸಂತೇಬಾಚಹಳ್ಳಿ ಮತ್ತು ನಾಗಮಂಗಲ ತಾಲೂಕಿನ 90 ಕ್ಕೂ ಅಧಿಕ ಕೆರೆಗಳಿಗೆ ಹೇಮಾವತಿ ನದಿಯಿಂದ ನೀರು ತುಂಬಿಸುವ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ, ಬೂಕನಕೆರೆ ಮತ್ತು ಶೀಳನೆರೆ ಹೋಬಳಿಯ 96 ಕೆರೆಗಳಿಗೆ ಹೇಮೆಯಿಂದ ನೀರು ತುಂಬಿಸುವ ಕಟ್ಟಹಳ್ಳಿ ಏತ ನೀರಾವರಿ ಯೋಜನೆಗಳ ಕಾಮಗಾರಿ ಅರ್ದಕ್ಕೆ ನಿಂತಿದ್ದು ರಾಜ್ಯ ಸರ್ಕಾರ ಈ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಕುಮಾರಣ್ಣ ಲೋಕಸಭೆಗೆ ಆಯ್ಕೆಯಾದರೆ ತಾಲೂಕಿನಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳು ಸೇರಿದಂತೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶಕ್ತಿ ಬರುತ್ತದೆಂದ ಶಾಸಕ ಹೆಚ್.ಟಿ.ಮಂಜು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಅಭಿವೃದ್ದಿಗೆ ಮತ್ತಷ್ಟು ವೇಗ ಬರುತ್ತದೆಂದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ವಿರೋಧ ಪಕ್ಷಗಳು ಅನಗತ್ಯ ಟೀಕೆ ಮಾಡುತ್ತಿವೆ. ಜಿಲ್ಲೆಯ ಜನ ಮೋದಿ ವಿರುದ್ದದ ಅಪಪ್ರಚಾರಕ್ಕೆ ಕಿವಿಗೊಡಬಾರದೆಂದು ಮನವಿ ಮಾಡಿದ ಶಾಸಕ ಹೆಚ್.ಟಿ.ಮಂಜು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಗರು ಯಾವ ಸ್ವಾತ್ಯಂತ್ರ?ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರ ರಾಷ್ಟ್ರ ಭಕ್ತಿಯ ಬಗ್ಗೆ ಪ್ರಶ್ನಿಸುವವರು ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರ ಸಹೋದರ ಡಿ.ಕೆ.ಸುರೇಶ್ ಯಾವ ಸ್ವಾತ್ಯಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು ಎನ್ನುವುದನ್ನು ದೇಶದ ಜನರ ಮುಂದೆ ಬಹಿರಂಗಪಡಿಸುವಂತೆ ಆಗ್ರಹಿಸಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ತಾಲೂಕಿನಲ್ಲಿ ಒಣಗುತ್ತಿರುವ ಬೆಳೆಗಳ ಸಂರಕ್ಷಣೆಗಾಗಿ ಅಗತ್ಯ ನೀರು ಹರಿಸುವಂತೆ ರಾಜ್ಯ ಸರ್ಕರವನ್ನು ಒತ್ತಾಯಿಸಿದರು. ಹೇಮಾವತಿ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ ರಾಜ್ಯ ಸರ್ಕಾರ ನೆರೆಯ ತುಮಕೂರು ಜಿಲ್ಲೆಗೆ ನೀರು ಹರಿಸಿ ಮಂಡ್ಯ ಜಿಲ್ಲೆಯ ರೈತರಿಗೆ ಮೋಸ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಧ್ವನಿಯೆತ್ತಿ ನಾಲೆಗಳಿಗೆ ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ. ಕುಮಾರಣ್ಣ ಗೆದ್ದು ಲೋಕಸಭೆಗೆ ಹೋದರೆ ರಾಜ್ಯದ ಸಮಸ್ತ ಸಮಸ್ಯೆಗಳ ಪರಿಹಾರಕ್ಕೆ ಬಹುದೊಡ್ಡ ಶಕ್ತಿ ಬರುತ್ತದೆ. ಕುಮಾರಣ್ಣ ಕೇವಲ ಮಂಡ್ಯ ಜಿಲ್ಲೆಯನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಅವರು ರಾಜ್ಯದ ಸಮಸ್ತ ಜನರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ. ಜಿಲ್ಲೆಯ ಅಭಿವೃದ್ದಿಗೆ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ಅನುದಾನ ತರುತ್ತಾರೆ. ವಿರೋಧ ಪಕ್ಷದ ಶಾಸಕರೆಂದು ಹೆಚ್.ಟಿ.ಮಂಜು ಅವರಿಗೆ ರಾಜ್ಯ ಸರ್ಕಾರ ಸ್ಪಂಧಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ನಾನು ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರ ಜೊತೆ ಕೈಜೋಡಿಸಿ ಸ್ಥಗಿತಗೊಂಡಿರುವ ತಾಲೂಕಿನ ಎಲ್ಲಾ ಏತ ನೀರಾವರಿ ಯೋಜನೆಗಳಿಗೂ ಅಗತ್ಯ ಅನುದಾನ ಬಿಡುಗಡೆ ಮಾಡಿಸಿಯೇ ತೀರುತ್ತೇನೆ. ನಾನು ಜೆಡಿಎಸ್ ಪಕ್ಷದಿಂದಲೇ ಶಾಸಕನಾದವನು. ಕ್ಷೇತ್ರದ ಅಭಿವೃದ್ದಿ ಮತ್ತು ನಮ್ಮ ತಾಲೂಕಿನ ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಬಿಜೆಪಿಗೆ ಹೋಗಬೇಕಾಯಿತು. ಹೆಚ್.ಟಿ.ಮಂಜು ಶಾಸಕರಾಗಿರುವುದಕ್ಕೆ ನನಗೆ ಬೇಸರವಿಲ್ಲ. ನನ್ನನ್ನು ಎರಡು ಅವಧಿಗೆ ಶಾಸಕನನ್ನಾಗಿ ಮಾಡಿದ ಕುಮಾರಣ್ಣನ ಋಣ ತೀರಿಸಬೇಕಾಗಿದೆ. ರಾಜ್ಯದ ಹಿತದೃಷ್ಠಿಯಿಂದ ಜಿಲ್ಲೆಯ ಜನ ಕುಮಾರಣ್ಣನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವಂತೆ ಮನವಿ ಮಾಡಿದರು.