ಕಾಂಗ್ರೆಸ್‍ನಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಗೋ ಬ್ಯಾಕ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.14-ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವುದನ್ನು ವಿರೋಧಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ರಾಜ್ಯಕ್ಕೆ ಬರ ಪರಿಹಾರ ನೀಡದ ಮೋದಿ ಗೋ ಬ್ಯಾಕ್ ಚಳವಳಿ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಸತ್ಯಮಂಗಲ ಮಾರ್ಗದ ರಸ್ತೆ ತಡೆದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ನೇತೃತ್ವದಲ್ಲಿ ಮಧ್ಯಾಹ್ನ ಪ್ರತಿಭಟನೆ ಮಾಡಲಾಯಿತು. ಕಾಂಗ್ರೆಸ್ ಬಾವುಟ ಹಿಡಿದು ಪಕ್ಷದ ಕಾರ್ಯಕರ್ತರು ಹಾಗು ಮುಖಂಡರು ಮೋದಿ ವಿರುದ್ದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ರಾಜ್ಯ ಸರ್ಕಾರ ರಾಜ್ಯದಲ್ಲಿರುವ ತಲೆದೋರಿರುವ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಸೆಪ್ಟೆಂಬರ್ ತಿಂಗಳಿನಲ್ಲೇ ಬರ ಪರಿಹಾರ ನೀಡುವಂತೆ ಮನವಿಯನ್ನು ಸಲ್ಲಿಸಿದೆ. ಒಂದಲ್ಲಾ ಆನೇಕ ಬಾರಿ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಕೃಷಿ ಸಚಿವರು ಸೇರಿದಂತೆ ಕೇಂದ್ರ ಸಂಪುಟದ ಅನೇಕ ಸಚಿವರನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರು ಮನವಿ ಸಲ್ಲಿಸಿ ಬಂದಿದ್ದರು. ಸಹ ಕೇಂದ್ರ ಸರ್ಕಾರ ಇದುವರೆಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಬರ ಪರಿಹಾರಕ್ಕಾಗಿ ಸೆಪ್ಟೆಂಬರ್‍ನಲ್ಲಿ ಮನವಿ ಸಲ್ಲಿಸಿದ್ದೇವೆ. ಬರ ಅಧ್ಯಯನ ತಂಡ ಅಕ್ಟೋಬರ್‍ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದೆ. ಅದೇ ತಿಂಗಳು ಕೇಂದ್ರಕ್ಕೆ 17,901 ಕೋಟಿ ರೂ. ಪರಿಹಾರ ಬಿಡುಗಡೆಗೆ ಪ್ರಸ್ತಾವನೆಯನ್ನು ಸಲ್ಲಿದ್ದೇವೆ. ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ ? ಇದು ಕನ್ನಡಿಗರ ಪ್ರಶ್ನೆಯಾಗಿದ್ದು, ಉತ್ತರ ಕೊಡಿ ಮೋದಿ ಅವರು ಎಂದು ಮರಿಸ್ವಾಮಿ ಪ್ರಶ್ನೆ ಮಾಡಿದರು.
ನೆರೆ ಬಂದಾಗ ಪರಿಸ್ಥಿತಿ ಅಧ್ಯಯನ ಮಾಡಲು ಬರದ ಮೋದಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಅಬ್ಬರ ಪ್ರಚಾರಕ್ಕೆ ರಾಜ್ಯಕ್ಕೆ ಬರುತ್ತಿರುವುದು ದುರಂತವಾಗಿದೆ. ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಬ್ಬರದ ಪ್ರಚಾರಕ್ಕೆ ರಾಜ್ಯ ಜನರು ತಕ್ಕ ಉತ್ತರ ನೀಡಿದ್ದಾರೆ. ಈಗ ಲೋಕಸಭಾ ಚುನಾವಣೆಯಲ್ಲಿ ಬರ ಪರಿಹಾರ ನೀಡದ ರಾಜ್ಯದ ಜನರನ್ನು ವಂಚಿಸಿರುವ ಬಿಜೆಪಿ ಹಾಗೂ ಮೋದಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್, ಎಸ್ಸಿ ಘಟಕದ ಅಧ್ಯಕ್ಷ ಸೊಮೇಶ್ವರ್, ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ, ಮುಖಂಡರಾದ ರವಿಗೌಡ, ಮುತ್ತಿಗೆ ದÉೂರೆ, ನಲ್ಲೂರು ಮಹದೇವಸ್ವಾಮಿ, ನಾಗು ಮೋಹನ್, ನಾಗವಳ್ಳಿ ನಾಗಯ್ಯ, ಬಸುಮರಿ, ಪಿ. ಶೇಖರ್, ಅಯ್ಯನಪ್ಮರ ಶಿವಕುಮಾರ್ ಮೊದಲಾದವರು ಇದ್ದರು.