ಶಾಂತಿ, ನೆಮ್ಮದಿಗಾಗಿ ಪರಮಾತ್ಮನ ಚಿಂತನೆ ಅಗತ್ಯ : ಶಿವಕುಮಾರ ಮಹಾಸ್ವಾಮಿಗಳು
ಭಾಲ್ಕಿ: ಏ.14:ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ಪಡೆಯಲು ಪರಮಾತ್ಮನ ಚಿಂತನೆ ಅತ್ಯಗತ್ಯವಾಗಿದೆ ಎಂದು ಬೀದರಿನ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠದ ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ತಾಲೂಕಿನ ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ, ಸದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ 188ನೇ ಜಯಂತಿ ಮಹೋತ್ಸವ ನಿಮಿತ್ಯ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಜಗತ್ತಿನ ಸಮಸ್ಥ ಪ್ರಶ್ನೆಗಳಿಗೆ ಒಂದೇ ಉತ್ತರ ಶಾಂತಿ, ನೆಮ್ಮದಿ ಪಡೆಯುವುದಾಗಿದೆ. ಶಾಂತಿ ಪಡೆಯಲು ಮನುಷ್ಯ ಹಲವು ಮಾರ್ಗಗಳನ್ನು ಹುಡುಕಿ ತೊಂದರೆಗೆ ಒಳಗಾಗುತ್ತಾನೆ. ಶಾಂತಿ ಬೇರೆಲ್ಲೂ ಇಲ್ಲ ಅದು ನಮ್ಮಲ್ಲಿಯೇ ಇದೆ ಅನ್ನುವ ಸತ್ಯ ಅರಿಯಬೇಕು. ಕೊಡದಲ್ಲಿರುವ ನೀರು ಮಹತ್ವದ್ದಾಗಿದೆ ಹೊರತು ಕೊಡ ಮಹತ್ವದಲ್ಲ, ಹಾಗೆಯೇ ಮನುಷ್ಯನ ಜ್ಯಾತಿ, ಮತ ಮಹತ್ವದಲ್ಲ, ಅವನಲ್ಲಿರುವ ಪರಿಶುದ್ದ ಮನಸ್ಸು ಮಹತ್ವದ್ದಾಗಿದೆ. ಗಾಳಿ, ಬೆಂಕಿಗಿಂತಲೂ ಮನಸ್ಸು ಚಂಚಲ, ಅದರ ನಿಯಂತ್ರಣಕ್ಕೆ ಗುರು ಕರುಣೆ ಬೇಕು. ನಮ್ಮ ಶರೀರ ಸಂಸಾರದಲ್ಲಿರೂ ಮನಸ್ಸುಮಾತ್ರ ಚಿಂತನೆಯಲ್ಲಿರಬೇಕು. ಸುಖ, ದು:ಖಗಳು ಸಮಾನಾಗಿ ಕಂಡು ಕೊಳ್ಳುವವರು ಧೀರರಾಗಿರುತ್ತಾರೆ. ಎಲ್ಲರ ಹೃದಯಲ್ಲಿರುವ ಪರಮಾತ್ಮ ಒಬ್ಬನೇ, ಆ ಪರಮಾತ್ಮನನ್ನು ಪ್ರೀತಿಸಿದಾಗ ಭೇದ ಬರುವುದಿಲ್ಲ ಎಂದು ಹೇಳಿದರು.
ಸಾನಿಧ್ಯವಹಿಸಿ ಮಾತನಾಡಿದ ಗೋಸಾಯಿ ಮಹಾಸಂಸ್ಥಾನ ಮಠ ಗವಿಪುರಂ ಬೆಂಗಳೂರಿನ ಜಗದ್ಗುರು ಶ್ರೀ ಮಂಜುನಾತ ಭಾರತಿ ಮಹಾಸ್ವಾಮಿಗಳು, ಅಧಿಕಾರಿ ವಾಣಿಯಿಂದ ಕೇಳಿದ ಮಾತುಗಳು ಹೃದಯಕ್ಕೆ ತಟ್ಟುತ್ತವೆ. ಬೀದರಿನ ಶಿವಕುಮಾರ ಮಹಾಸ್ವಾಮಿಗಳದ್ದು ಅಧಿಕಾರವಾಣಿಯಾಗಿದೆ. ಅವರ ವಾಣಿಗಳು ನಮ್ಮೆಲ್ಲರ ಹೃದಯ ತಟ್ಟುವವು ಎಂದು ಹೇಳಿದರು. ಕಲಬುರಗಿ ಶ್ರೀ ಸಿದ್ಧಾರೂಢ ಮಠದ ಮಾತೆ ಲಕ್ಷ್ಮೀದೇವಿ ಮಾತನಾಡಿ, ಎಲ್ಲರಲ್ಲಿಯೂ ನಮ್ಮನ್ನು ಕಾಣುವ ಭಾವ ಬರಬೇಕು. ಸುಖ ದು:ಖ, ಮಾನಾಪಮಾನ, ಲಾಭ ಹಾನಿಗಳಲ್ಲಿ ಸಮಾನಾಗಿ ಕಾಣುವನೇ ಧೀರನಾಗಿರುವನು ಎಂದು ಹೇಳಿದರು.
ಬೀದರ ಹಾಗು ಬಬಚ್ಛಡಿ ಆಶ್ರಮದ ಶ್ರೀ ಗಣೇಶಾನಂದ ಮಹಾರಾಜರು ಮಾತನಾಡಿ, ಸುಖ, ದು:ಖಗಳು ಬರುತ್ತವೆ ಹೋಗುತ್ತವೆ. ಅವು ಕ್ಷಣಿಕ, ಸುಖ ಬಂದಾಗ ಹಿಗ್ಗದೇ, ದು:ಖ ಬಂದಾಗ ಕುಗ್ಗದೇ ಎರಡೂ ಸಮಾನವಾಗಿ ಕಂಡು ಕೊಳ್ಳುವಾತನೆ ನಿಜ ಶರಣನಾಗಿದ್ದಾನೆ. ಶರೀರ ಧರ್ಮಶಾಲೆಯಂತೆ, ಸುಖ, ದುಖಗಳು ಶರೀರದಲ್ಲಿ ಬರುತ್ತವೇ ಹೋಗುತ್ತವೆ. ಅವು ಇಲ್ಲಿ ಶಾಸ್ವತವಾಗಿ ಉಳಿಯುವುದಿಲ್ಲ. ಅದಕ್ಕಾಗಿ ಸುಖ ದುಖಗಳನ್ನು ಸಮಾನಾಗಿ ಹಂಚಿಕೊಳ್ಳಬೇಕು ಎಂದು ಹೇಳಿದರು.
ಇದೇವೇಳೆ ಕಲ್ಲಹಂಗರಗಾದ ಮಲ್ಲಮ್ಮಾ ಭೀಮಾಶಂಕರ ಬಡಿಗೇರ, ಸಂಜೀವಕುಮಾರ ಜೀತನೋರ ಕೊಳಾರ, ತೇಜಸ್ವಿ ಶಿವಾನಂದ ಗುರಲಾ ಬೀದರ, ಸದಾನಂದ ಮಾನಕಾರ ಚಿಕಲ ಚಂದಾ ರವರಿಗೆ ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ತುಲಾಭಾರ ಸೇವೆ ಸಲ್ಲಿಸಲಾಯಿತು. ಮತ್ತು ಪ್ರೇಮಲಾ ಚಂದ್ರಶೇಖರ ಅಂಬೆಸಿಂಗೆ, ನಾಗಮ್ಮ ವೈಜಿನಾಥಪ್ಪ ಧಾಬಶೆಟ್ಟಿ, ನಾವದಗಿ ಯವರಿಗೆ ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುದೇವಾಶ್ರಮ ಬೀದರಿನ ಮಾತೆ ಸಿದ್ದೇಶ್ವರಿ ತಾಯಿ, ಮಳಚಾಪೂರ ಶ್ರೀ ಸದ್ರೂಪಾನಂದ ಸ್ವಾಮಿಗಳು, ಗೋಪಾಲ ಶಾಸ್ತ್ರಿಗಳು ಕಲ್ಲಹಂಗರಗಾ, ಮಾತೋಶ್ರೀ ಸಂಗೀತಾ ತಾಯಿ, ಶಶಿಕಲಾ ತಾಯಿ ಉಪಸ್ಥಿತರಿದ್ದರು. ಪ್ರಭು ಮಾಸುಲ್ದಾರ, ಸೋಮನಾಥ ಶೀಲವಂತ, ಗುಂಡಪ್ಪಾ, ಬಸವರಾಜ ಹುಲೆಪ್ಪನೋರ ರವರಿಂದ ಸಂಗೀತ ಸೇವೆ ನಡೆಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಶಂಕರಾನಂದ ಸ್ವಾಮಿಗಳು ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಪಾಟೀಲ, ಶಿವಾನಂದ ಸ್ವಾಮಿಗಳು ನಿರೂಪಿಸಿದರು. ವಿನಾಯಕ ಸಾಧಕರು ವಂದಿಸಿದರು.