ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.14:ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ನೀರಿನ ಸಮಸ್ಯೆ ಉದ್ಭವಿಸುವ ಕಡೆಯಲ್ಲಿ ತುರ್ತಾಗಿ ಅಗತ್ಯ ಕ್ರಮ ಕೈಗೊಂಡು ನೀರು ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶುಕ್ರವಾರ ಸಂಜೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ನಿರ್ವಹಣೆ ಕುರಿತು ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದಾಗ್ಯೂ ಅಧಿಕಾರಿಗಳು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜಿಲ್ಲೆಯಲ್ಲಿ ಲಭ್ಯವಿರುವ ನೀರಿನ ಸದ್ಭಳಕೆಯೊಂದಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಹೊನಗನಹಳ್ಳಿಯ 5 ಎಂಎಲ್‍ಡಿ ನೀರು ಸರಬರಾಜು ಸಮಸ್ಯೆ ಕುರಿತು ನಾಳೆಯೇ ಸಂಬಂಧಿಸಿದ ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಇರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸುವಂತೆ ಸೂಚಿಸಿದ ಅವರು, ವಿವಿಧೆಡೆ ಎಕ್ಸಟೆನ್‍ಶನ್ ಪ್ರದೇಶ ಹೆಚ್ಚಾಗಿ ನಿರ್ಮಾಣವಾಗುತ್ತಿರುವುದರಿಂದ ನೀರಿನ ಅವಶ್ಯಕತೆ ಹೆಚ್ಚಾಗಲಿದ್ದು, ನೀರಿನ ಅಭಾವವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಜಯಪುರ ನಗರದಲ್ಲಿರುವ ವಿವಿಧ ಬೊರವೆಲ್‍ಗಳು, ಕೈಪಂಪುಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಒಟ್ಟು 502 ಬೊರವೆಲ್‍ಗಳ ಪೈಕಿ 476 ಬೊರವೆಲ್‍ಗಳು ಚಾಲ್ತಿಯಲ್ಲಿದ್ದು, 26 ಬೊರವೆಲ್‍ಗಳು ಚಾಲ್ತಿಯಲ್ಲಿರುವುದಿಲ್ಲ. ಬಂದ್À ಇರುವ ಬೊರವೆಲ್‍ಗಳನ್ನು ಸುಸ್ಥಿತಿಗೆ ತರಲು ಪ್ರಯತ್ನಿಸಬೇಕು. ಬಂದ್ ಇರುವ ಈ 26 ಬೊರವೆಲ್‍ಗಳು ವಿವಿಧ ಎಕ್ಸಟೆನ್‍ಶೆನ್ ಪ್ರದೇಶಗಳಲ್ಲಿರುವುದರಿಂದ ದುರಸ್ತಿಗೆ ಕ್ರಮ ವಹಿಸಿದ್ದಲ್ಲಿ ವಿವಿಧ ವಾರ್ಡಗಳಿಗೆ ಹೆಚ್ಚುವರಿ ನೀರು ಒದಗಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಯಾವುದೇ ಅನಾಹುತಕ್ಕೆ ಅವಕಾಶ ನೀಡದೆ ಸುಸ್ಥಿತಿಯಲ್ಲಿರದ ಬೊರವೆಲ್‍ಗಳನ್ನು ಮುಚ್ಚಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಸಮಸ್ಯೆ ಇರುವ ಸ್ಥಳಗಳಿಗೆ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆ ಪರಿಹಾರಕ್ಕಾಗಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಜನವರಿಗೆ ತಿಳಿ ಹೇಳಿ, ಮನವರಿಕೆ ಮಾಡಬೇಕು. ಇದರಿಂದ ಜನರಲ್ಲಿಯೂ ಸಹ ಅಧಿಕಾರಿಗಳ ಮೇಲೆ ವಿಶ್ವಾಸ ಮೂಡುವುದರಿಂದ ಅಧಿಕಾರಿಗಳು ಕುಡಿಯುವ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ನಗರದಲ್ಲಿರುವ 33 ತೆರೆದ ಬಾವಿಗಳಲ್ಲಿ 7 ತೆರೆದ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿರುವುದರಿಂದ ಮೋಟರ್ ಅಳವಡಿಸಲು ಸಾಧ್ಯವಾಗಿಲ್ಲ. ರಿ-ಡ್ರಿಲ್ಲಿಂಗ್ ಮಾಡುವ ಮೂಲಕ ಸುಸ್ಥಿತಿಯಲ್ಲಿಡಲು ಪ್ರಯತ್ನಿಸಬೇಕು. ಆದಾಗ್ಯೂ ನೀರಿನ ಇಳುವರಿ ಬರದೇ ಇದ್ದ ಸಂದರ್ಭದಲ್ಲಿ ತೆರೆದೆ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮ ವಹಿಸಬೇಕು. ಕೌಜಲಗಿ ತಾಂಡಾ ಹೊರತುಪಡಿಸಿ ಉಳಿದೆಡೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದ್ದು, ಭೂತನಾಳ ತಾಂಡಾದಲ್ಲಿನ ಪೈಪಲೈನ್ ಕಾಮಗಾರಿಗೆ ವಿಪತ್ತು ನಿಧಿಯಡಿ 2ಲಕ್ಷ ರೂ.ವರೆಗಿನ ದುರಸ್ತಿ ಕಾಮಗಾರಿ ಅನುದಾನ ಒದಗಿಸಲು ಅವಕಾಶವಿರುವುದರಿಂದ ಭೂತನಾಳ ತಾಂಡಾದಲ್ಲಿ ಪೈಪಲೈನ್ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು.
ಸಾರ್ವಜನಿಕರು ಸಹ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ, ಅನಗತ್ಯವಾಗಿ ನೀರನ್ನು ಎಲ್ಲೆಂದರಲ್ಲಿ ಹರಿಬಿಡದೇ ಅಗತ್ಯವಿರುವ ನೀರನ್ನು ಬಳಕೆ ಮಾಡಿಕೊಳ್ಳುವಂತೆ ಮನವರಿಕೆ ಮಾಡಬೇಕು. ಲಭ್ಯವಿರುವ ನೀರಿನ ಸದ್ಭಳಕೆ ಮಾಡಿಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡಿ ಎಲ್ಲ ವಾರ್ಡ್‍ಗಳಿಗೆ ಕನಿಷ್ಠ 3 ರಿಂದ 4 ದಿನಗಳಿಗೊಮ್ಮೆ ನೀರು ಪೂರೈಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅರ್ಶದ ಶರೀಫ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಪ್ರೀತಮ ನಸ್ಲಾಪುರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.