ಜಿಲ್ಲಾ ಅಧ್ಯಕ್ಷರ ನಡೆ ಖಂಡನೀಯ:ನಾಗಯ್ಯ ಗುತ್ತೇದಾರ
ಚಿತ್ತಾಪುರ:ಏ.13: ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ್ ಗುತ್ತೇದಾರ್ ಅವರು ಆರ್ಯ ಈಡಿಗ ತಾಲ್ಲೂಕು ಅಧ್ಯಕ್ಷರ ನೇಮಕದಲ್ಲಿ ಏಕೈಕ ನಿರ್ಧಾರ ಕೈಗೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿ ಉಂಟು ಮಾಡಿದ್ದಾರೆ ಅವರ ಈ ನಡೆಯನ್ನು ಖಂಡಿಸುವುದಾಗಿ
ತಾಲ್ಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ನಾಗಯ್ಯ ಗುತ್ತೇದಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಬಾಜಾಜ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಅಧ್ಯಕ್ಷರ ನೇಮಕ ಮಾಡಿ ಆದೇಶ ನೀಡುವ ಅಧಿಕಾರ ಜಿಲ್ಲಾಧ್ಯಕ್ಷರಿಗೆ ಇಲ್ಲ. ಆದರೆ ನಮಗೆ ಮಾಹಿತಿ ನೀಡದೇ ಚಿತ್ತಾಪುರಕ್ಕೆ ಬಂದು ಸಭೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಸಮಾಜದ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಅವರು ತಕ್ಷಣ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಒಂದು ವರ್ಷದ ಅವಧಿಗೆ ಮಾತ್ರ ನನ್ನನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರು ಸುಳ್ಳು ಹೇಳಿಕೆ ನೀಡಿದ್ದಾರೆ. ನನಗೆ ಅಧ್ಯಕ್ಷರನಾಗಿ ಮಾಡಿದವರು ಜಿಲ್ಲಾಧ್ಯಕ್ಷರಲ್ಲ, ಚಿತ್ತಾಪುರ ತಾಲ್ಲೂಕಿನ ಸಮಾಜದ ಮುಖಂಡರು ಸೇರಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ನನಗೆ ಮೂರು ವರ್ಷ ಅವಧಿ ಇದ್ದು, ಇನ್ನೂ ಎರಡು ವರ್ಷ ಅವಧಿ ಇದೆ. ಜಿಲ್ಲಾಧ್ಯಕ್ಷರು ಬುಧವಾರ ತರಾತುರಿಯಲ್ಲಿ ಬಂದು ಸಮಾಜದ ಕೆಲವು ಮುಖಂಡರ ಸಭೆ ನಡೆಸಿ ಶಂಕರಗೌಡ ರಾವೂರಕರ್ ಅವರನ್ನು ತಾಲ್ಲೂಕಾಧ್ಯಕ್ಷರೆಂದು ನೇಮಕ ಮಾಡಿ ಆದೇಶ ನೀಡಿದ್ದೂ ಕಾನೂನು ಬಾಹಿರವಾಗಿದೆ ಎಂದು ಅವರು ದೂರಿದರು.
ಜಿಲ್ಲಾಧ್ಯಕ್ಷರ ಅವಧಿ 3 ವರ್ಷ ಇದ್ದರೂ 7 ವರ್ಷದವರೆಗೆ ಮುಂದುವರಿಯುತ್ತಿದ್ದಾರೆ. ಮುಂದುವರಿಯುವ ಅಧಿಕಾರ ಅವರಿಗೆ ಯಾರು ನೀಡಿದ್ದಾರೆಂದು ಪಶ್ನಿಸಿದ ಅವರು, ಎಲ್ಲ ತಾಲ್ಲೂಕು ಅಧ್ಯಕ್ಷರು ಕೂಡಿಕೊಂಡು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರ ಮೂರು ವರ್ಷ ಅವಧಿ ಮುಗಿದು 7 ವರ್ಷವಾಗಿದೆ. ಕೂಡಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದರು. ಜಿಲ್ಲಾಧ್ಯಕ್ಷರು ತಾಲ್ಲೂಕಿನ ಸಮಾಜದ ಎಲ್ಲ ಮುಖಂಡರನ್ನು ಮನವೊಲಿಸಿ ಸಮಾಜವನ್ನು ಒಂದು ಗೂಡಿಸುವ ಕೆಲಸ ಮಾಡಬೇಕು. ಸಮಾಜದಲ್ಲಿ ಗೊಂದಲ ಮೂಡಿಸಿ ಒಡೆಯುವ ಕೆಲಸ ಮಾಡಬಾರದು. ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀಮಂತ್ ಗುತ್ತೇದಾರ್, ಕಾಶಣ್ಣ ಗುತ್ತೇದಾರ್ ಕರದಾಳ್, ಸತ್ಯನಾರಾಯಣ್, ಉಮೇಶ್ ಗುತ್ತೇದಾರ್, ರವಿ ಗುತ್ತೇದಾರ್, ಸಂತೋಷ್ ಗುತ್ತೇದಾರ್, ನರಸಯ್ಯ ಗುತ್ತೇದಾರ್, ಮೋಹನ್ ಬಾಹರಪೇಟ್ ಸೇರಿದಂತೆ ಇತರರು ಇದ್ದರು.