ಸಾಧನೆಗೆ ಬಡತನ ಅಡ್ಡಿಯಾಗದು ಎಂದು ಸಾಧಿಸಿ ತೋರಿದ ಅಂಬಿಕಾ ಸ್ವಾಮಿಪ್ರತಿಭಾವಂತ ವಿದ್ಯಾರ್ಥಿನಿಗೆ ಬೇಕಿದೆ ಸಹಾಯ ಹಸ್ತ
ಔರಾದ : ಏ.13:ಸಾಧನೆಗೆ ಬಡತನ ಅಡ್ಡಿಯಲ್ಲ, ಸಾಧಿಸುವ ಛಲವಿದ್ದಲ್ಲಿ ಎಂತಹ ಕಾರ್ಯವೂ ಸಾಧಿಸಬಹುದು ಎನ್ನುವುದಕ್ಕೆ ತಾಲೂಕಿನ ನಾರಾಯಣಪೂರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಅಂಬಿಕಾ ಸಂಗಯ್ಯಸ್ವಾಮಿ ಉತ್ತಮ ನಿದರ್ಶನ, ಹೌದು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ 580 ಅಂಕಗಳು(ಶೇ.96) ಪಡೆಯುವ ಮೂಲಕ ಔರಾದ್ ತಾಲೂಕಿನಲ್ಲಿಯೇ ವಿಜ್ಞಾನ ವಿಭಾಗಕ್ಕೆ ಟಾಪರ್‍ಆಗಿ ಹೊರಹೊಮ್ಮಿದ್ದಾರೆ.
ಪಟ್ಟಣದ ಇಕ್ರಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅಂಬಿಕಾ ಅವರು ದೈನಂದಿನವಾಗಿ ಕಾಲೇಜಿನಲ್ಲಿ ಹೇಳಿದ ಪಾಠಗಳನ್ನು ಕರಗತ ಮಾಡಿಕೊಂಡು ತನ್ನ ಬುದ್ಧಿ ಶಕ್ತಿ ಮತ್ತು ಪ್ರತಿಭೆಯಿಂದಲೇ ಓದಿ ತಾಲ್ಲೂಕಿಗೆ ಟಾಪರ್ ಆಗಿದ್ದಾರೆ. ಕನ್ನಡ-97, ಇಂಗ್ಲಿಷ್-95, ಭೌತಶಾಸ್ತ್ರ-94, ರಸಾಯನಶಾಸ್ತ್ರ-95, ಗಣಿತ-100 ಹಾಗೂ ಜೀವಶಾಸ್ತ್ರ-99 ಅಂಕ ಪಡೆದಿದ್ದಾರೆ. ಇವರ ಸಾಧನೆಗೆ ಕಾಲೇಜು ಪ್ರಾಂಶುಪಾಲ ಗಾಜಿ ಅಲಿ ಹಾಗೂ ಸಿಬ್ಬಂದಿ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದ್ದಾರೆ.
ಸಾಧನೆಗೆ ಬಡತನ ಅಡ್ಡಿಯಾಗದು ಎಂದು ತೋರಿಸಿದ ಇವರ ಸಾಧನೆ ಮುಂದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ. ಸಧ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡತನ ಮತ್ತು ಕೌಟುಂಬಿಕ ಸಮಸ್ಯೆ ಅಡ್ಡಿ ಆಗಬಾರದು, ಸಮಾಜದ ಪ್ರಜ್ಞಾವಂತರು, ದಾನಿಗಳು ಸಹಾಯ ಹಸ್ತ ನೀಡಿದ್ದರೆ ಈ ಮಗಳ ಭವಿಷ್ಯ ಉಜ್ವಲವಾಗಲಿದೆ.
ನಾರಾಯಣಪೂರ ಗ್ರಾಮದ ಬಡ ಕುಟುಂಬದ ತಾಯಿ ಸವಿತಾ ಸ್ವಾಮಿ ಅವರ ಪುತ್ರಿ ಅಂಬಿಕಾ ಸ್ವಾಮಿ. 8 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ತಾಯಿಯೇ ಆಸರೆ. ತನ್ನ ಎರಡು ಮಕ್ಕಳನ್ನು ಕೂಲಿ ಕೆಲಸ ಮಾಡಿ ಉತ್ತಮ ಶಿಕ್ಷಣ ನೀಡಿದ್ದಾರೆ. ಚಿಕ್ಕ ಮಗ ಚನ್ನಬಸವ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ತಾಯಿಗೆ ಜೋತೆಯಾಗಿ ಮನೆ ಕೆಲಸದ ಜೊತೆಗೆ ಸರಿಯಾದ ಸಮಯಕ್ಕೆ ಕಾಲೇಜಿಗೆ ತೆರಳಿ ಉಪನ್ಯಾಸಕರ ಪಾಠಗಳನ್ನು ಆಲಿಸಿ ವಿಜ್ಞಾನ ವಿಭಾಗಕ್ಕೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದದ್ದು ಬಡ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ತೀರಾನೇ ಸಾಮಾನ್ಯ ಕುಟುಂಬದ ಈ ಯುವತಿಯ ಸಾಧನೆ ಇವತ್ತು ಎಲ್ಲರಿಗೂ ಅಚ್ಚರಿ ತಂದಿದೆ.
ಈ ಬಗ್ಗೆ ವಿದ್ಯಾರ್ಥಿನಿ ಅಂಬಿಕಾ ಸ್ವಾಮಿ ಮಾತನಾಡಿ, ”ನನ್ನ ಸಾಧನೆಗೆ ಉಪನ್ಯಾಸಕರು, ತಂದೆ-ತಾಯಿ, ಮತ್ತು ನನ್ನ ಹಿತೈಷಿಗಳ ಪೆÇ್ರೀತ್ಸಾಹ ಕಾರಣ. ಉಪನ್ಯಾಸಕರು ಕಲಿಸಿದ ಪಾಠವನ್ನು ಮನೆಗೆ ಬಂದು ಓದಿ, ಹತ್ತು ಬಾರಿ ಬರೆಯುತ್ತಿದ್ದೆ. ದಿನಕ್ಕೆ ಆರು ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದೆ. ಮುಂದೆ ಇಂಜಿನಿಯರಿಂಗ್ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ತನ್ನ ಕುಟುಂಬಕ್ಕೆ ನಾನು ಆಸರೆಯಾಗಿ ನಿಲ್ಲಬೇಕಾಗಿದೆ ಎಂದರು. ಉದ್ಯೋಗ ದೊರೆತ ಮೇಲೆ ನನ್ನಂತೇ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂಬ ಆಸೆ ಇದೆ ಎನ್ನುತ್ತಾರೆ ಅಂಬಿಕಾ.
ಫಸ್ಟ್ ಕ್ಲಾಸ್‍ನ್ಯಾಗ ಮಗ್ಳು ಪಾಸಾಗ್ಯಾಳ ಅಂತ ಸುದ್ದಿ ಕೇಳಿ ಭಾಳ ಖುಷಿ ಆಯ್ತು. ಮುಂದ ಮಗಳಿಗೆ ಓದಬೇಕು ಅಂತ ಮನಸಾದ. ಆದ್ರ, ಏನ್ ಮಾಡೋದು. ಬಡತನ ಬೆನ್ನು ಬಿಡವಲ್ಲು. ಏನ್ಮಾಡಬೇಕು ಅದೇ ಕಾಡತಾದ.
ಸವಿತಾ ಸ್ವಾಮಿ,
ವಿದ್ಯಾರ್ಥಿನಿ ಅಂಬಿಕಾ ತಾಯಿ.
ತಾಯಿ ಕೂಲಿ ಕೆಲಸ ಮಾಡಿ ನಮಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ ನಮಗೆ ಸರ್ಕಾರದ ಯಾವುದೇ ಸವಲತ್ತುಗಳು ದೊರಕಿಲ್ಲ. ಬೆವರು ಸುರಿಸಿ ಕೂಲಿಮಾಡುವುದೆ ನಮ್ಮ ಬದುಕಾಗಿದೆ. ಮುಂದಿನ ವ್ಯಾಸಂಗ ಮಾಡಲು ದಾನಿಗಳು ನೆರವು ನೀಡಿದರೆ, ಪದವಿ ಪಡೆದು ಅವರ ಋಣವನ್ನು ತೀರಿಸುವೆ.
ಅಂಬಿಕಾ ಸ್ವಾಮಿ.
ಟಾಪರ್ ವಿದ್ಯಾರ್ಥಿನಿ
ಅಂಬಿಕಾ ಸ್ವಾಮಿ ಪ್ರತಿಭಾವಂತ ಮಗಳು, ಉತ್ತಮ ಸ್ವಭಾವ ಮತ್ತು ಅಧ್ಯಯನಶಿಲತೆ ಮೈಗೂಡಿಸಿಕೊಂಡ ಈಕೆಗೆ ಪ್ರಜ್ಞಾವಂತರು ಸಹಾಯ ಮಾಡಿದ್ದರೆ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುತ್ತಾಳೆ ಎನ್ನುವ ವಿಶ್ವಾಸವಿದೆ, ಮುಂದಿನ ವ್ಯಾಸಂಗ ಮಾಡಲು ಬಡತನ ಅಡ್ಡಿಯಾಗಿದೆ ಸಂಘ ಸಂಸ್ಥೆಗಳು ಈಕೆಯ ಸಹಾಯಕ್ಕೆ ಮುಂದಾಗಬೇಕಿದೆ.
ಅಶೋಕ ಶೆಂಬೆಳ್ಳಿ
ಎಬಿವಿಪಿ ಮುಖಂಡ ಔರಾದ