ವಿದ್ಯಾರ್ಥಿಗಳ ಸಾಧನೆ ಹರ್ಷ ತಂದಿದೆ: ಸರೋಜಿನಿದೇವಿ ಪಾಟೀಲ
ಸಂಜೆವಾಣಿ ವಾರ್ತೆ
ಲಿಂಗಸೂಗೂರು.ಏ.೧೩- ಸತತ ಅಧ್ಯಯನದಿಂದ ಮಾತ್ರ ಉತ್ತಮ ಅಂಕಗಳು ಪಡೆಯಲು ಸಾಧ್ಯ, ವಿದ್ಯಾರ್ಥಿಗಳ ಇಂದಿನ ಸಾಧನೆ ಸಂತಸದ ಜೊತೆಗೆ ಭವಿಷ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸುವ ಮುನ್ಸೂಚನೆಯಾಗಿದೆ. ಉನ್ನತ ಸ್ಥಾನಕ್ಕೇರಿದಾಗ ಸಮಾಜದ ಒಳಿತಿಗೆ ಶ್ರಮಿಸುವ ಉದಾತ್ತ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಸಂಗಮೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಸರೋಜಿನಿದೇವಿ ಪಾಟೀಲ್ ಕರೆ ನೀಡಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ ೯೮% ಅಂಕಗಳು ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ಕು. ನಿರುಪಾದಿ ಛತ್ರಪ್ಪ ಬನ್ನಿಗೋಳ, ೯೫ ಕ್ಕೂ ಅಧಿಕ ಅಂಕಗಳು ಪಡೆದು ಉತ್ತಮ ಸಾಧನೆಗೈದ ಕು. ಅಕ್ಕಮಹಾದೇವಿ, ಕು. ದುರುಗೇಶ್ ಅವರಿಗೆ ಮಹಾವಿದ್ಯಾಲಯಲ್ಲಿ ಹಮ್ಮಿಕೊಂಡ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಪ್ರಾಚಾರ್ಯ ಬಸವರಾಜ ವೈ ಮಾತನಾಡಿ, ೧೦ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩೫ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ೨೮ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಒಟ್ಟು ಕಾಲೇಜಿನ ಫಲಿತಾಂಶ ಶೇ.೮೧.೧೪% ಆಗಿದೆ. ಈ ಸಾಧನೆಗೆ ಆಡಳಿತ ಮಂಡಳಿ ಸಹಕಾರ, ಉಪನ್ಯಾಸಕರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ನಿರಂತರ ಓದು ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.