ಭೀಕರ ಬರ ಬದುಕು ದುಸ್ತರ
ರಾಯಚೂರು.ಏ.೧೩- ಕಳೆದ ವರ್ಷ ಮಳೆರಾಯನ ಮುನಿಸಿನಿಂದ ಈ ವರ್ಷ ಭೀಕರ ಬರ ಅವರಿಸಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಭೀಕರ ಬರಕ್ಕೆ ಜನರು ಮತ್ತು ಪ್ರಾಣ ಸಂಕುಲದ ಬದುಕು ದುಸ್ತರವಾಗಿದೆ.
ಜಸ್ಟ್ ಒಂದು ಮಳೆಗಾಲ ಕೈಕೊಟ್ಟರೆ ಸಾಕು. ಆಗುವ ಅನಾಹುತ ಅಷ್ಟಿಷ್ಟಲ್ಲ. ಇಡೀ ಎಕಾನಾಮಿ ಮೇಲೆ ಮಾತ್ರವಲ್ಲ, ಜನಜೀವನದ ಮೇಲೂ ಭೀಕರ ಎಫೆಕ್ಟ್ ಆಗಬಲ್ಲದು ಎಂಬುದು ಈ ವರ್ಷದ ಬರ ಉತ್ತಮ ನಿರ್ದೇಶನವಾಗಿದೆ.
ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿ ಒಂದಡೆ ಜನರಿಗೆ ನೀರಿಲ್ಲದೆ ಮತ್ತೊಂದಡೆ ಬರಗಾಲದಲ್ಲಿ ಕೆಲಸ ಇಲ್ಲದೇ ಹಳ್ಳಿಗಾಡರ ಬದುಕು ಮತ್ತಿಷ್ಟು ಅದ್ವಾನವಾಗಿದೆ. ಗ್ರಾಮೀಣ ಪ್ರದೇಶದ ಜನರು ನೀರಿಗಾಗಿ ಬೆಟ್ಟ ಹಳ್ಳ ಕೆರೆ ಕಟ್ಟೆಗಳತ್ತ ಅಲೆದಾಡುತ್ತಿರುವ ದೃಶ್ಯಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ವಿಶೇಷವಾಗಿ ಈ ಭಾರೀ ಭೀಕರ ಬರ ಆವರಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಭೀಕರ ಬರಕ್ಕೆ ಜನ ಜೀವನ ಬದುಕು ಕೆಳದಂತಾದರೆ ಇನ್ನೊಂದಡೆ ಪ್ರಾಣ ಸಂಕುಲ ನೀರಿಗಾಗಿ ಅರಣ್ಯ ಪ್ರದೇಶಗಳಿಂದ ನಾಡಿಗೆ ಲಗ್ಗೆ ಇಡುತ್ತಿರುವ ದೃಶ್ಯಗಳು ಮನಕಲಕುತ್ತಿದೆ.
ಭೀಕರ ಬರ, ಬತ್ತಿದ ಅಂತರ್ಜಲ, ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆಯಿಂದಾಗಿ ಜನ ಸಾಮಾನ್ಯರು ಮತ್ತು ಮೂಕ ಪ್ರಾಣಿಗಳು ನೀರಿಗಾಗಿ ಕಂಗಾಲಾಗಿವೆ. ಜಾನುವಾರು ಮತ್ತು ಬೀದಿ ನಾಯಿಗಳು ದಾಹ ತೀರಿಸಿಕೊಳ್ಳಲು ನೀರು ಕಂಡಲ್ಲಿ ಹೋಗುವ ದೃಶ್ಯ ಮನಕಲಕುತ್ತಿದೆ.
ಪ್ರಾಣ ಸಂಕುಲ ಕುಡಿಯುವ ನೀರಿಗಾಗಿ ಅರಣ್ಯ ಪ್ರದೇಶದಲ್ಲಿ ಅಲೆದಾಡುವ ಮನಕುಲವ ದೃಶ್ಯಗಳು ಎಲ್ಲಡೆ ಕಂಡು ಬರುತ್ತಿದೆ. ಬರ ಕೇವಲ ಮನುಷ್ಯರಿಗೆ ಮಾತ್ರ ಅಲ್ಲದೆ ಮೂಕ ಪ್ರಾಣಿಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಎಂದು ಕಂಡು ಅರಿಯದ ರಣಭೀಕರ ಬರಕ್ಕೆ ತತ್ತರಿಸಿದ ಮೂಕ ಪ್ರಾಣಿಗಳು ನೀರಿಗಾಗಿ ಕಂಡ ಕಂಡಲ್ಲಿ ಹೋಗುವ ದೃಶ್ಯಗಳು ಮೂಕ ಪ್ರಾಣಿಗಳ ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ.
ಭೀಕರ ಬರಕ್ಕೆ ತತ್ತರಿಸಿದ ಅರಣ್ಯ ಪ್ರದೇಶಗಳಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹಳ್ಳ ಕರೆ ನದಿಗಳು ಬತ್ತಿ ಹೋಗಿರುವದರಿಂದ ಕುಡಿಯುವ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ.
ಮಳೆರಾಯ ಈ ಬಾರಿ ದೊಡ್ಡ ಪ್ರಮಾಣದಲ್ಲಿಯೇ ಕೈಕೊಟ್ಟಿರುವ ಹಿನ್ನಲೆ ಮಳೆಯ ಕೊರತೆಯಿಂದಾಗಿ ನದಿ, ಕೆರೆ, ಕೊಳ್ಳಗಳೆಲ್ಲ ಬತ್ತಿವೆ. ಅಂತರ್ಜಲ ಪಾತಾಳ ಸೇರಿದೆ. ರಾಜ್ಯ ಸರ್ಕಾರ ಜಿಲ್ಲೆ ಸೇರಿ ೨೨೩ ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ. ನೀರು, ಮೇವು ಇಲ್ಲದ ಭೀಕರ ಪರಿಸ್ಥಿತಿಗೆ ರೈತರು ಜಾನುವಾರುಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೀರಿನ ಬರ ಜನರ ಬದುಕನ್ನು ಅಲ್ಲದೇ ಪ್ರಾಣಿಗಳ ಬದುಕನ್ನೆ ದುಸ್ತರಗೊಳಿಸಿದೆ. ಪ್ರಾಣಿಗಳ ಸಂಕುಲದ ಶಾಪ ಇಡೀ ಮಾನವ ಕುಲಕ್ಕೆ ತಟ್ಟುತ್ತಿದೆ. ಭೀಕರ ಬರಕ್ಕೆ ತತ್ತರಿಸಿದ ಜನರು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಇಲ್ಲದೆ ರಾಜ್ಯ ಸೇರಿದಂತೆ ಅನ್ಯ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಭೀಕರ ಬರ ಜನಸಾಮಾನ್ಯರ ಬದುಕು ಮೇಲೆ ಗಂಭೀರ ಪರಿಣಾಮ ಬೀರಿದೆ.
ಗ್ರಾಮಾಂತರ ಪ್ರದೇಶ ಜನರು ಹಳ್ಳಿಗಳಲ್ಲಿ ವಾಸ ಮಾಡಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ನರೇಗಾ ಕಾಮಗಾರಿ ಅನುಷ್ಠಾನ ಮಾಡಬೇಕೆಂದು ಗ್ರಾಮೀಣ ಜನತೆ ಒತ್ತಾಯಿಸಿದ್ದಾರೆ.