ಚನ್ನಗಿರಿ ತಾಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ – ಅಭಿವೃದ್ಧಿಗೆ ಬದ್ದ
ಸಂಜೆವಾಣಿ ವಾರ್ತೆ
ಚನ್ನಗಿರಿ : ಚಿತ್ರದುರ್ಗ-ಚನ್ನಗಿರಿ-ಶಿವಮೊಗ್ಗ ದ್ವಿಪತ ಹೆದ್ದಾರಿಯನ್ನು 334 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋದಿ ಸಿಕ್ಕಿದ್ದು, ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಚನ್ನಗಿರಿ ತಾಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನಾನು ಕಟಿಬದ್ಧಳಾಗಿದ್ದೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.ಚನ್ನಗಿರಿ ತಾಲೂಕಿನ 20 ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಸಂಸದ ಜಿ.ಎಂ.ಸಿದ್ದೇಶ್ವರ್ ಅವರು 20 ವರ್ಷಗಳಲ್ಲಿ ಚನ್ನಗಿರಿ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟ ಶ್ರಮಿಸಿದ್ದಾರೆ. ನಿಮ್ಮ ಸೇವೆ ಮಾಡಲು ಈ ಬಾರಿ ನನಗೆ ಅವಕಾಶ ಸಿಕ್ಕಿದೆ. ತಾಲೂಕಿನ ಸಮಗ್ರ ನೀರಾವರಿ ಯೋಜನೆ ಯಶಸ್ವಿ ಅನುಷ್ಟಾನ ಹಾಗೂ ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದರು.ಜಿ.ಎಂ.ಸಿದ್ದೇಶ್ವರ್ ಅವರು ಜಿಲ್ಲೆಯ 2ನೇ ಆದರ್ಶ ಗ್ರಾಮವಾಗಿ ಚನ್ನಗಿರಿ ತಾಲೂಕಿನ ಮಲ್ಲಾಪುರ ಗ್ರಾಮ ಆಯ್ಕೆ ಮಾಡಿಕೊಂಡು ಸುಮಾರು 2.11 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದಾರೆ. 1.50 ಕೋಟೆ ವೆಚ್ಚದಲ್ಲಿ ರೈತರಿಗೆ ಅನುಕೂಲವಾಗುವಂತೆ ಟ್ರಾನ್ಸ್ಫರ್ಮರ್ಗಳನ್ನು ಹಾಕಿಸಿ ವಿದ್ಯುತ್ ಸಂಪರ್ಕ ಕೊಡಿಸಿದ್ದಾರೆ. ಸಂತೆಬೆನ್ನೂರಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ 2.35 ಕೋಟಿ ಅನುದಾನ, ದೇವರಹಳ್ಳಿಯಲ್ಲಿ9.50 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್, ಚನ್ನಗಿರಿ ಪಟ್ಟಣದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ 4.12 ಕೋಟಿ, 15ನೇ ಹಣಕಾಸು ಯೋಜನೆಯಲ್ಲಿ ಪುರಸಭೆಗೆ 93 ಲಕ್ಷ ರೂಪಾಯಿ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ದೇಶ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ದೇಶದ ರಕ್ಷಣೆ, ಸನಾತನ ಧರ್ಮದ ಉಳಿವು, ಏಳ್ಗೆಗಾಗಿ ಮೋದಿ ಜೀ ಅವರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಅಂತಹ ಧೀಮಂತ ನಾಯಕ ನಮಗೆ-ನಿಮಗೆ ಸಿಕ್ಕಿರುವುದು ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಮೋದಿ ಜೀ ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ ನಮ್ಮ ಭವಿಷ್ಯದ ಮಕ್ಕಳು, ಹೆಣ್ಣ ಮಕ್ಕಳು ನಿರ್ಭೀತಿಯಿಂದ ಬಾಳಬಹುದು. ಅಲ್ಲಿ ಮೋದಿ ಜೀ ಅವರು ಪ್ರಧಾನಿ ಆಗಬೇಕು ಎಂದರೆ ಇಲ್ಲಿ ನೀವು ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಕಳುಹಿಸಬೇಕು. ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ, ಇದು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಅಲ್ಲ. ಲೋಕಸಭಾ ಚುನಾವಣೆ. ದೇಶದ ಚುನಾವಣೆ. ದೇಶದ ಚುಕ್ಕಾಣಿ ಯಾರು ಹಿಡಿಯಬೇಕುಯ ಅನ್ನೋ ಚುನಾವಣೆ. ದೇಶದ ಒಳಿತಿಗಾಗಿ, ಅಭಿವೃದ್ಧಿಗಾಗಿ ತಾವೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ಚನ್ನಗಿರಿ ತಾಲೂಕಿನ ಮತದಾರರು ಹೆಚ್ಚನ ಸಂಖ್ಯೆಯಲ್ಲಿ ಗಾಯಿತ್ರಿ ಅಮ್ಮನವರಿಗೆ ಮತ ಚಲಾಯಿಸುವ ಮೂಲಕ ಮೋದಿ ಅವರ ಕೈಬಲ ಪಡಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಮುಖಂಡ, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಮಾತನಾಡಿ, ಈ ಬಾರಿ ವಿಕಸಿತ ಭಾರತ್, ಮತ್ತೊಮ್ಮೆ ಮೋದಿ ಎಂದು ಚುನಾವಣೆಗೆ ಹೋಗುತ್ತಿದ್ದೇವೆ. ಎಲ್ಲರೂ ಮೋದಿ ಮೋದಿ ಎಂದು ಪ್ರಭಾವಿತರಾಗಿದ್ದಾರೆ. ಮೋದಿ ಅವರ ನೀಡಿದ ಎಲ್ಲ ಯೋಜನೆಗಳನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ. ಎಲ್ಲ ವರ್ಗದವರು ಮೋದಿ ಅವರನ್ನು ಮೆಚ್ಚಿಕೊಂಡಿದ್ಧಾರೆ. ನಾವು ಕೂಡ ಪ್ರತಿ ಗ್ರಾಮದಲ್ಲಿರುವ ಎಲ್ಲ ವರ್ಗ, ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಾಯಿತ್ರಿ ಅಕ್ಕನವರಿಗೆ ಮತ ಹಾಕಿಸಬೇಕು ಎಂದು ಕರೆ ನೀಡಿದರು.