ಕೊಟ್ಟೂರುಸ್ವಾಮಿ ಮಠದಲ್ಲಿ ಹಾನಗಲ್ಲಕುಮಾರೇಶ್ವರರ ಜೀವನ ದರ್ಶನ ಪುರಾಣ ಆರಂಭ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.20; ನಗರದ  ಕೊಟ್ಟೂರು ಸ್ವಾಮಿ ಮಠದಲ್ಲಿ ನಿನ್ನೆಯಿಂದ 10 ದಿನಗಳ ಕಾಲ ಹಮ್ಮಿಕೊಂಡಿರುವ ಹಾನಗಲ್ಲಿನ ಕುಮಾರ ಶಿವಯೋಗಿಗಳ ಜೀವನ ದರ್ಶನದ ಪ್ರವಚನವನ್ನು ಹಮ್ಮಿಕೊಂಡಿದೆ.
ಮಠದ ಶ್ರೀಗಳಾದ ಬಸವಲಿಂಗ ಶ್ರೀಗಳ  ಸಾನಿಧ್ಯದಲ್ಲಿಪ್ರತಿದಿನ ಸಂಜೆ 7 ರಿಂದ 8.30 ರವರೆಗೆ  ಹಾನಗಲ್  ಕುಮಾರ ಶಿವಯೋಗಿಗಳ 157 ಜಯಂತ್ಯೋತ್ಸವ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 86ನೇ ಜಯಂತೋತ್ಸವದ ಅಂಗವಾಗಿ ಈ  ಪ್ರವಚನ(ಪುರಾಣ) ನಡೆಯುತ್ತಿದೆ.
ಹತ್ತು ದಿನಗಳ ಕಾರ್ಯಕ್ರಮಕ್ಕೆ ಮಠದಶ್ರಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು.ಕುರುಗೋಡಿನ ನಿರಂಜನ ಪ್ರಭುಶ್ರೀಗಳು, ಬೂದುಗುಂಪದ ಶ್ರೀಗಳು, ಸೋಮಸಮುದ್ರ ಸಿದ್ದಲಿಂಗ ಶ್ರೀಗಳು, ಮಸೀದಿಪುರದ ಸಿದ್ರಾಮನಗೌಡ, ಪತ್ರಕರ್ತ ಎನ್.ವೀರಭದ್ರಗೌಡ ಭಾಗವಹಿಸಿದ್ದರು.
ಡೋಣಿಯ ಶಶಿಧರ ಶಾಸ್ತ್ರಿಗಳು ಪ್ರವಚನ ನೀಡುತ್ತಿದ್ದು. ಸಂಗೀತಗಾರರಾಗಿ  ಡಿ.ಕಗ್ಗಲ್ಲಿನ ದೊಡ್ಡ ಬಸವ ಗವಾಯಿ,  ತಬಲ ವಾದಕರಾಗಿ ತೋಟೇಂದ್ರ ಕರಡಕಲ್ ಅವರು ಪುರಾಣ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವಚನ ನೀಡಿದ ಶಶಿಧರ ಶ್ರೀಗಳು ಭಕ್ತಿ, ಕಾಯಕದ ಮಹತ್ವ ತಿಳಿಸಿದರು.
ನಂತರ ಮಠದ ಶ್ರೀಗಳಾದ ಬಸವಲಿಂಗ ಶ್ರೀಗಳು, ಇಂದಿನ ಯಾಂತ್ರಿಕ ಬದುಕಿನಲ್ಲಿ ಜನತೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಜನತೆ, ಭಕ್ತ ಸಮೂಹ ಪುರಾಣ ಪ್ರವಚನಗಳಲ್ಲಿ ಭಾಗವಹಿಸಿ ಯಾಂತ್ರಿಕ ಬದುಕಿನಿಂದ ದೂರವಾಗಿ ಶಾಂತಿ ನೆಮ್ಮದಿ ಪಡೆಯಲು ಮುಂದಾಗಿ. ಜೊತೆಗೆ ಬದುಕಿನಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಬೆಳಸಿಕೊಳ್ಳಬೇಕು. ದುಡಿಮೆಯಲ್ಲಿ ಹಂಚಿಕೊಂಡು ತಿನ್ನುವ  ಕೆಲಸ ನಮ್ಮದಾಗಬೇಕು ಎಂದು ಹೇಳಿದರು.
ಪುರಾಣಕ್ಕೆ ಆಗಮಿಸುವ ಭಕ್ತರಿಗೆ ಇಲ್ಲಿನ ಬಸವೇಶ್ವರನಗರ, ತಾಲೂಕಿನ ಶ್ರೀಧರಗಡ್ಡೆ ಮತ್ತು ಸೋಮಸಮುದ್ರ ಗ್ರಾಮದಿಂದ ಬಸ್ ವ್ಯವಸ್ಥೆ ಕಲ್ಪಿಸಿದೆ ಜೊತೆಗೆ ಪುರಾಣದ ನಂತರ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿದೆ.