ನಟಿ ಮಾಲಾಶ್ರೀ ಗೆ ಇಂದು “ಶಾಂಭವಿ ಶ್ರೀ” ಪ್ರಶಸ್ತಿ ಪ್ರಧಾನ
ಬೈಲಹೊಂಗಲ,ಏ.13:ಇಂದು ಸಂಜೆ ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರಿಗೆ “ಶಾಂಭವಿ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ವೇ. ಮೂ. ಡಾ. ಮಹಾಂತಯ್ಯಾ ಆರಾದ್ರಿಮಠ ಶಾಸ್ತ್ರಿ ಹೇಳಿದರು.
ಪಟ್ಟಣದ ಮುರಗೋಡ ರಸ್ತೆಯಲ್ಲಿನ ಬಸವನಗರದ 4 ನೇ ಅಡ್ಡ ರಸ್ತೆಯಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ, ನಾಗ ಪ್ರತಿಷ್ಟಾಪನೆ, ದುರ್ಗಾ ಹವನಕ್ಕೆ ಪೂರ್ಣಾಹುತಿ ಅರ್ಪಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನ ಕಮೀಟಿ ವತಿಯಿಂದ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ “ಶಾಂಭವಿ ಶ್ರೀ” ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದ್ದು,ಪ್ರಸ್ತುತ ಸಾಲಿನಲ್ಲಿ ಖ್ಯಾತ ನಟಿ ಮಾಲಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಂಜೆ 7 ಘಂಟೆಗೆ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ಧರ್ಮ ಸಭೆ,ಸೈನಿಕ ದಂಪತಿಗಳಿಗೆ ಸತ್ಕಾರ ಸಮಾರಂಭದ ನಂತರ ಪೂಜ್ಯರ, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದರು.
ಲೋಕಕಲ್ಯಾಣಾರ್ಥವಾಗಿ ದೇವಸ್ಥಾನದಲ್ಲಿ ಹೋಮ, ಹವನಾಧಿ ಕಾರ್ಯಕ್ರಮ ನಡೆದವು.