ಭದ್ರಕಾಳಿ ದೇವಿ ವಿಗ್ರಹಕ್ಕೆ ಭೂಮಿ ಪೂಜೆ
ಹೊಸಕೋಟೆ, ಏ. ೧೩: ಮುಕ್ಕಂಡೇಶ್ವರ ಸಮೇತ ನೆಲಸಿರುವ ಶ್ರೀ ಭದ್ರಕಾಳಿ, ಶ್ರೀ ಚೌಡೇಶ್ವರಿ ದೇವಿ ಮತ್ತು ಶ್ರೀ ಪ್ರತ್ಯಂಗಿರಾ ದೇವಿ ದೇವಾಲಯದಲ್ಲಿ ಅಮ್ಮನವರ ಆಶೀರ್ವಾದದಿಂದ ಇಂದು ೯೯ ಅಡಿಯ ಶ್ರೀ ಭದ್ರಕಾಳಮ್ಮನವರ ಸೌಮ್ಯ ರೂಪ ವಿಗ್ರಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಕೆ.ಬಿ. ನಾಗರಾಜಶಾಸ್ತ್ರಿಗಳು ತಿಳಿಸಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಕಾಳಪ್ಪನಹಳ್ಳಿ ಗ್ರಾಮದ ಶ್ರೀ ಭದ್ರಕಾಳಮ್ಮ ದೇವಿ ಹಾಗೂ ಪ್ರತ್ಯಂಗಿರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಭೂಮಿ ಪೂಜೆ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು,
ಯುಗಾದಿಯ ಅಮಾವಾಸ್ಯೆಯ ಪ್ರಯುಕ್ತ ಬೆಳಿಗ್ಗೆಯಿಂದ ದೇವಿಗೆ ರುದ್ರಾಭಿಕ್ಷೇಕ, ದುರ್ಗಾಹೋಮ, ಪೂರ್ಣಾಹುತಿ ಹಾಗೂ ರಾಜೋಪಚಾರ ನೆರವೇರಿಸಿ ಅನೇಕ ವರ್ಷಗಳ ಸಂಕಲ್ಪದ ಪ್ರತಿಫಲವಾಗಿ ಇಂದು ೯೯ ಅಡಿಗಳ ಶ್ರೀ ಭದ್ರಕಾಳಿ ಅಮ್ಮನವರ ಸೌಮ್ಯ ರೂಪ ವಿಗ್ರಹಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಪುಟ್ಟ ಗ್ರಾಮದಲ್ಲಿ ಬಂದು ನೆಲೆಸಿದ್ದ ದೇವಿಗೆ ಇಂದು ಅನೇಕ ಭಾಗಗಳಿಂದ ಭಕ್ತರನ್ನು ಒಳಗೊಂಡಂತೆ ಬೃಉಹತ್ ಆಕಾರವಾಗಿ ಬೆಳೆದಿದೆ. ಉಗ್ರರೂಪಿಯಾಗಿ ಇರುವ ಭದ್ರಕಾಳಿ ದೇವಿ ಈ ಗ್ರಾಮದಲ್ಲಿ ಸೌಮ್ಯ ರೂಪಳಾಗಿ ನೆಲೆಸಿದ್ದು, ಶಿವನ ಜೊತೆಗೆ ಶಕ್ತಿಮಾತೆ ಇರುವ ಕಾರಣ ಗ್ರಾಮಕ್ಕೆ ಹಾಗೂ ಭಕ್ತಾಧಿಗಳಿಗೆ ಒಳಿತಾಗುತ್ತದೆ ಎಂಬ ನಂಬಿಕೆ.
ಮೊದಲಿಗೆ ೫೫ ಅಡಿ ದೇವಿ ವಿಗ್ರಹ ಪ್ರತಿಷ್ಠಾಪನೆಗೆ ಭೂಮಿ ಪೂಜೆ ಮೆರವೇರಿಸಿದೆವು ಆದರೆ ಅಲ್ಲಿ ಪ್ರತ್ಯಂಗಿರಾ ದೇವಿ ಪ್ರತಿಷ್ಠಾಪನೆ ಆಯಿತು. ೮ ವರ್ಷದ ಸಂಕಲ್ಪ ಇಂದು ನೆರವೇರುತ್ತಿದೆ. ೯೯ ಅಡಿ ಎತ್ತರದ ವಿಗ್ರಹ ಪ್ರತಿಷ್ಠಾಪನೆಯಿಂದ ಗ್ರಾಮಕ್ಕೆ ಒಳಿತಾಗುತ್ತದೆ ಅದರಲ್ಲೂ ಸೌಮ್ಯ ರೂಪವಾಗಿ ಪ್ರತಿಷ್ಠಾಪನೆ ಮಾಡುತ್ತಿದ್ದು ವಿಗ್ರಹದ ನೆರಳಿನಲ್ಲಿ ಸಂಚರಿಸಿದರು ಭಕ್ತಾಧಿಗಳಿಗೆ ಆರೋಗ್ಯ ವೃದ್ಧಿಯಾಗಿ ಸಮೃದ್ಧವಾಗಿರುತ್ತಾರೆ. ಈಗಾಗಲೇ ಎಲ್ಲೆಡೆ ಬರಗಾಲ ಆವರಿಸುತ್ತಿದ್ದು. ಇದೆಲ್ಲ ದೂರವಾಗಿ ಸಮೃದ್ಧಿಯಾಗಿ ಮಳೆ-ಬೆಳೆಯಾಗಿ ನಾಡು ಸಂತಸದಿಂದ ಕೂಡಿಡಲಿ ಎಂದು ದೇವರಲ್ಲಿ ಸಂಕಲ್ಪ ಮಾಡಿ ಎಂದು ತಿಳಿಸಿದ್ದಾರೆ.
ಗ್ರಾ.ಪಂ. ಮಾಜಿ ಸದಸ್ಯರಾದ ಮುನಿರಾಜು ಮಾತನಾಡಿ, ಪುಟ್ಟ ಗ್ರಾಮವಾದ ನಮ್ಮ ಕಾಳಪ್ಪನಹಳ್ಳಿ ಇಂದು ರಾಜ್ಯದ ಎಲ್ಲಾ ಭಾಗಗಳಲ್ಲಿ ಹೆಸರುಮಾಡುವಂತೆ ಮಾಡಿರುವುದು ಶ್ರೀ ಭದ್ರಕಾಳಿ ಶಕ್ತಿ ಪೀಠದಿಂದ ಮಾತ್ರ ಸಾಧ್ಯ. ಇಂದು ಅಪಾರ ಸಂಖ್ಯೆಯ ಭಕ್ತರನ್ನು ಒಳಗೊಂಡಿದ್ದು. ದೇವಾಲಯದ ಅರ್ಚಕರು ತಮ್ಮ ಸ್ವಂತ ಜಮೀನಿನಲ್ಲಿ ಪುಟ್ಟದಾಗಿ ನಿರ್ಮಾಣ ಮಾಡಿದ ದೇವಾಲಯ ಇಂದು ಬೃಹದಾಕಾರವಾಗಿ ಬೆಳೆದಿದೆ. ಬಂದಂತಹ ಭಕ್ತರ ಕಷ್ಟವನ್ನು ನಿವಾರಣೆ ಮಾಡಿ ಬೇಡಿದ ವರಗಳನ್ನು ಕಲ್ಪಿಸುತ್ತಾ ಗ್ರಾಮಕ್ಕೆ ಸುಭೀಕ್ಷವಾಗಿ ನೆಲೆಸಿದ್ದಾಳೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತ್ಯಂಗಿರಾದೇವಿಗೆ ಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಿದರು. ಕಾರ್‍ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಅರ್ಚಕರು ಆಗಮಿಸಿದ್ದರು.