ಖರ್ಗೆಯವರ ಕ್ಷೇತ್ರದಲ್ಲಿ ಮೋದಿ ದ್ವೇಷದ ಪ್ರಚಾರ: ಡಿ.ಕೆ. ಶಿವಕುಮಾರ
ಕಲಬುರಗಿ:ಏ.12: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಅಧಿಸೂಚನೆ ಹೊರಡಿಸುವ ಮುನ್ನ ಕ್ಷೇತ್ರಕ್ಕೆ ಬಂದು ದ್ವೇಷದ ಪ್ರಚಾರ ಆರಂಭಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದರು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಶುಕ್ರವಾರ ಕಾಂಗ್ರೆಸ್ ಪರ ಬೃಹತ್ ಬಹಿರಂಗ ಸಬೆಯಲ್ಲಿ ಮಾತನಾಡಿದ ಅವರು, ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಇದೂವರೆಗೆ ಕೈಗೊಂಡ ಅಭಿವೃದ್ದಿ ಕಾರ್ಯಗಳ ಅದರಲ್ಲೂ ಆರ್ಟಿಕಲ್ 371ಜೆ ಜಾರಿಗೆ ತಂದಿರುವುದಕ್ಕೆ ಪ್ರತಿಯಾಗಿ ನೀವೆಲ್ಲ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಉತ್ತರ ನೀಡಬೇಕು ಎಂದು ಕರೆ ನೀಡಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ವಿವರಿಸಿದ ಅವರು ಖರ್ಗೆ ಸಾಹೇಬರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೊತೆಗೂಡಿ ಈ ಯೋಜನೆಗಳನ್ನು ರೂಪಿಸಿದ್ದರು. ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಕಾರ್ಡ್‍ಗಳಿಗೆ ಸಹಿ ಹಾಕಿ ಕಳಿಸಿ ಅದರಂತೆ ನಡೆದುಕೊಂಡಿದ್ದೇವೆ. ಈಗ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇದೇ ತರಹದ ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ಅದರಂತೆ ಪ್ರತಿ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂ.ಗಳ ಅನುದಾನ ನೀಡಲಾಗುವುದು. ಶ್ರಮಿಕರಿಗಾಗಿ ಪ್ರತಿದಿನ 400 ರೂ.ಗಳ ರಾಷ್ಟ್ರೀಯ ಕನಿಷ್ಠ ವೇತನ ನೀಡಲಾಗುವುದು ಎಂದು ಅವರು ಘೋಷಿಸಿದರು.
ಬಡವರ ಪರವಾದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಖರ್ಗೆ ಸಾಹೇಬರ ಹಾಗೂ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗೆಲ್ಲಿಸಿಕೊಟ್ಟಂತೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನ ಗೆಲ್ಲಿಸಬೇಕು ಇದು ಎಲ್ಲರ ಆಸೆಯಾಗಿದೆ. ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಖರ್ಗೆ ಸಾಹೇಬರ ಕೈ ಬಲಪಡಿಸಿ ಎಂದು ಅವರು ಮನವಿ ಮಾಡಿದರು.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಸೌಮ್ಯ ಸ್ವಭಾವದವರು. ಅವರು ನಿಮ್ಮ ಸೇವೆ ಈಗ ಸಜ್ಜಾಗಿದ್ದಾರೆ. ಅವರನ್ನು ಕನಿಷ್ಠ 5 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕೋರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಡಾ. ಮನಮೋಹನಸಿಂಗ್ ಅವರ ನೇತೃತ್ವದಲ್ಲಿನ ಯುಪಿಎ ಸರ್ಕಾರದ ವಿರುದ್ಧ ಬೆಲೆ ಏರಿಕೆಯನ್ನು ಖಂಡಿಸಿದ್ದರು. ಈಗ ಮೋದಿಯವರು ಪ್ರಧಾನಿಯಾದ ಮೇಲೆ ಅಡಿಗೆ ಅನಿಲ, ತೈಲ ಬೆಲೆಗಳು ಗಗನಕ್ಕೇರಿವೆ. ಆ ಕುರಿತು ಯಾವುದೇ ರೀತಿಯಲ್ಲಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಇನ್ನು ಸ್ವಿಸ್ ಬ್ಯಾಂಕ್‍ದಲ್ಲಿನ ಕಪ್ಪು ಹಣವನ್ನು ತಂದು ಅಭಿವೃದ್ಧಿ ಮಾಡುವುದಾಗಿ ಘೋಷಿಸಿದ್ದರು. ಆ ಹಣ ಇನ್ನೂವರೆಗೆ ತಂದಿಲ್ಲ ಎಂದು ಅವರು ದೂರಿದರು.
ನಾನು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಆಗಲೇ ನಾನು ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿವೃದ್ಧಿ ಕಾರ್ಯಗಳನ್ನು ಮನಗಂಡಿದ್ದೇನೆ. ಹಾಗಾಗಿ ಖರ್ಗೆ ಅವರ ಕೈ ಬಲಪಡಿಸಲು ರಾಧಾಕೃಷ್ಣ ಅವರನ್ನು ಗೆಲ್ಲಿಸಿ ಎಂದು ಅವರು ಹೇಳಿದರು.
ವೇದಿಕೆಯ ಮೇಲೆ ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ್ ಶಾಸಕ ಬಿ.ಆರ್. ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್, ಶಾಸಕರಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ಯು.ಬಿ. ವೆಂಕಟೇಶ್, ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಬಸನಗೌಡ ತುರ್ವಿಹಾಳ್, ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಎಚ್.ಎಂ. ರೇವಣ್ಣ, ಬಾಬುರಾವ್ ಚಿಂಚನಸೂರು, ಮಾಜಿ ಲೋಕಸಭಾ ಸದಸ್ಯ ವಿ.ಎಸ್. ಉಗ್ರಪ್ಪ, ವಿ. ವಸಂತಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಬಸರೆಡ್ಡಿ ಪಾಟೀಲ್ ಅನಪೂರ್, ಭಾಗನಗೌಡ ಸಂಕನೂರು, ಶ್ರೇಣಿಕಕುಮಾರ್ ಧೋಕಾ, ಶಿವಾನಂದ್ ಪಾಟೀಲ್, ಡೇವಿಡ್ ಸಿಮೆಯೋನ್, ಮಾಜಿ ಮಹಾಪೌರ ಡಾ. ಶರಣು ಮೋದಿ, ಮಹಜರ್‍ಖಾನ್, ಪ್ರವೀಣ್ ಹರವಾಳ್, ರಾಜೀವ್ ಜಾನೆ, ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ್ ಕರದಾಳ್, ನೀಲಕಂಠ್ ಮೂಲಗೆ, ಡಾ. ಡಿ.ಜಿ. ಸಾಗರ್, ಭೀಮಣ್ಣ ಸಾಲಿ ಮುಂತಾದವರು ಉಪಸ್ಥಿತರಿದ್ದರು.