ರಾಧಾಕೃಷ್ಣ ಗೆಲ್ಲಿಸಿದರೆ ನಿಜವಾದ ಕಲ್ಯಾಣ ಕರ್ನಾಟಕ ಮಾಡಿತೋರಿಸುವೆ: ಖರ್ಗೆ
ಕಲಬುರಗಿ:ಏ.12: ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸಿ, ಮುಂದಿನ ಐದು ವರ್ಷಗಳಲ್ಲಿ ಏನು ಬದಲಾವಣೆ ಮಾಡುತ್ತೇನೆ ನೋಡಿ, ಈ ಭಾಗವನ್ನು ನಿಜವಾದ ಕಲ್ಯಾಣ ಕರ್ನಾಟಕವನ್ನಾಗಿ ಮಾಡಿ ತೋರಿಸುವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದರು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಪಕ್ಷದ ಪರ ಬೃಹತ್ ಬಹಿರಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ದಿ ಕೆಲಸ ಮಾಡಿದರೂ ಸಹ ಕಳೆದ ಲೋಕಸಭಾ ಚುನಾವನೆಯಲ್ಲಿ ತಮಗೆ ಮತ ಬೀಳದಿರುವ ಕುರಿತು ನೋವು ತೋಡಿಕೊಂಡರು.
ನಾವು ಅಭಿವೃದ್ದಿ ಕೆಲಸ ಮಾಡಿದರೂ ಮತದಾರರು ಮತಗಟ್ಟೆ ಒಳಗೆ ಹೋದ ನಂತರ ಖರ್ಗೆ ಅವರನ್ನು ಮರೆತುಬಿಡುತ್ತಾರೆ. ಆದರೆ ಈ ಸಲ ಹಾಗೆ ಮಾಡಬೇಡಿ, ರಾಧಾಕೃಷ್ಣ ಅವರಿಗೆ ಓಟು ಕೊಟ್ಟು ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.
ಈ ಚುನಾವಣೆ ಕೇವಲ ರಾಧಾಕೃಷ್ಣ ಅಥವಾ ಕಾಂಗ್ರೆಸ್ ಚುನಾವಣೆಯಲ್ಲ. ಬದಲಿಗೆ ದೇಶದ ಸಂವಿಧಾನ ಪ್ರಜಾಸತ್ತೆ ಉಳಿಸುವ ಚುನಾವಣೆಯಾಗಲಿದೆ. ಪ್ರತಿಯೊಂದು ಸಂಸ್ಥೆಗಳಲ್ಲಿ ಆರ್‍ಎಸ್‍ಎಸ್ ಹುಡುಗರನ್ನು ಸೇರಿಸುತ್ತಿದ್ದಾರೆ. ಹಾಗಾಗಿ ಪ್ರಜಾತಂತ್ರ ಉಳಿಯಬೇಕು ಹಾಗೂ ಈ ಭಾಗ ಬೆಳೆಯಬೇಕು ಎನ್ನುವ ಇಚ್ಛೆ ಇದ್ದರೆ ಕಾಂಗ್ರೆಸ್‍ಗೆ ಮತ ನೀಡಿ ಎಂದು ಕೋರಿದ ಅವರು, ನಿಮ್ಮ ದರ್ಶನಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಖರ್ಗೆ ಅವರು, ಮೋದಿ ಅವರು ಇಲ್ಲಿಗೆ ಬಂದು ಹೋಗಿದ್ದಾರೆ ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಈ ಭಾಗಕ್ಕೆ ಏನು ಕೊಟ್ಟಿದ್ದಾರೆ ಹೇಳಬೇಕಿತ್ತು ಎಂದರು.
ನಗರದಲ್ಲಿ ಇಎಸ್‍ಐ ಆಸ್ಪತ್ರೆ ಕಟ್ಟಿದ್ದೇವೆ. ಅಲ್ಲಿ ಏಮ್ಸ್ ನಿರ್ಮಾಣ ಮಾಡಲು ಮೋದಿ ಅವರಿಗೆ ಮನವಿ ಮಾಡಿದ್ದೆ. ಆದರೆ ನನ್ನ ಮೇಲೆ ಏನು ಸಿಟ್ಟು ಗೊತ್ತಿಲ್ಲ ನಮ್ಮ ಮನವಿಯನ್ನು ಪುರಸ್ಕರಿಸಲಿಲ್ಲ. ನನ್ನ ಅವಧಿಯಲ್ಲಿ ಮಂಜೂರಾಗಿದ್ದ ರೇಲ್ವೆ ವಲಯ ಯೋಜನೆ ವಾಪಸ್ ಹೋಗಿದೆ. ನಾನು ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳಲ್ಲಿ ಶೇಕಡಾ 10ರಷ್ಟು ಅಭಿವೃದ್ಧಿ ಮಾಡಿದ್ದರೆ ತೋರಿಸಲಿ ಆಗ ನಾನು ಶಹಬ್ಬಾಶ್ ಎನ್ನುತ್ತೇನೆ ಎಂದು ಅವರು ಸವಾಲು ಹಾಕಿದರು.
ಮೋದಿ ತಮ್ಮ ಗ್ಯಾರಂಟಿ ಏನು ಎಂದು ಮೊದಲು ಜನರಿಗೆ ತಿಳಿಸಲಿ ಎಂದು ಆಗ್ರಹಿಸಿದ ಖರ್ಗೆ ಅವರು8, ನಾವು ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ರೀತಿಯಲ್ಲೇ ತಮ್ಮ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಆದರೆ ಯಾವ ಗ್ಯಾರಂಟಿ ಎಂದು ಹೇಳಿಲ್ಲ ಎಂದರು. ಪೆಟ್ರೋಲ್ ಡಿಸೇಲ್, ಗ್ಯಾಸ್ ಸಿಲಂಡರ್ ಬೆಲೆ ಏರಿದೆ ಮೋದಿಯವರೇ ಇದೇನೆ ನಿಮ್ಮ ಗ್ಯಾರಂಟಿನಾ? ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿ, ಉದ್ಯೋಗ ಕೊಡಲಿಲ್ಲ ಇದು ನಿಮ್ಮ ಗ್ಯಾರಂಟಿನಾ? ಪ್ರತಿಯೊಬ್ಬರಿಗೆ ಹದಿನೈದು ಲಕ್ಷ ಕೊಡುತ್ತೇನೆ ಎಂದಿದ್ದರು, ಕೊಟ್ಟರಾ? ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು, ಮಾಡಿದ್ದಾರ? ಎಂದು ಅವರು ಖಾರವಾಗಿ ಪಶ್ನಿಸಿದರು.
ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ದಿ ಕೆಲಸಗಳ ಪಟ್ಟಿ ನೀಡಿದ ಖರ್ಗೆ, ರಾಷ್ಟ್ರೀಯ ಹೆದ್ದಾರಿ, ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪಿಸಿದ್ದೇನೆ. ಮೂವತ್ತೇಳು ಹೊಸ ರೈಲು ಓಡಿಸಿದ್ದೇನೆ. ಜವಳಿ ಪಾರ್ಕ್ ಮಂಜೂರು ಮಾಡಿಸಿದ್ದೇನೆ. ಇವುಗಳನ್ನು ನೀವು ಮಾಡಿ ಎಂದು ನನಗೆ ಯಾರೂ ಹೇಳಿರಲಿಲ್ಲ. ಆದರೆ ನಮ್ಮ ಭಾಗದ ಅಭಿವೃದ್ದಿಗಾಗಿ ಕೆಲಸ ಮಾಡಿದ್ದೇನೆ ಈಗ ಓಟು ಕೇಳುತ್ತಿದ್ದೇನೆ. ಅಭಿವೃದ್ದಿ ಆಗಬೇಕೆಂದರೆ ಕಾಂಗ್ರೆಸ್‍ಗೆ ಮತ ನೀಡಿ, ಕಳೆದ ಸಲದ ಸೋಲಿನ ಸೇಡು ತೀರಿಸಿಕೊಳ್ಳಿ ಎಂದು ಅವರು ಮನವಿ ಮಾಡಿದರು.
ಬಿಜೆಪಿ ಬಳಿ ವಾಷಿಂಗ್ ಮಷಿನ್ ಇದೆ. ಯಾರನ್ನೂ ಭ್ರಷ್ಟಾಚಾರಿಗಳು ಎಂದು ಹೇಳಿ ಜೈಲಿಗೆ ಹಾಕುತ್ತಾರೋ ಅಂತವರನ್ನೇ ಆ ಮಷಿನ್ ಮೂಲಕ ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ಒಳ್ಳೆಯವರು ಎಂದು ಬಿಂಬಿಸುತ್ತಾರೆ ಎಂದು ವ್ಯಂಗ್ಯವಾಡಿದ ಖರ್ಗೆ ಅವರು, ಭ್ರಷ್ಟಾಚಾರಿಗಳನ್ನು ಬಿಡುವುದಿಲ್ಲವೆಂದು ಮೋದಿ ಹಾಗೂ ಅಮಿತ್ ಶಾ ಹೇಳುತ್ತಾರೆ. ಬಿಡುವ ಮಾತಿರಲಿ ನಿಮ್ಮ ಪಕ್ಕದಲ್ಲೇ ಕೂಡಿಸಿಕೊಂಡಿದ್ದೀರಲ್ಲ ಎಂದು ತಿರುಗೇಟು ನೀಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವುದೇ ಕಂಪೆನಿಯಲ್ಲಿ ಯುವಕ ಯುವತಿಯರು ಅಂಪ್ರೆಟಿಸಿಪ್ ಮಾಡಿ ಬಂದರೆ ಅವರಿಗೆ ಉದ್ಯೋಗ ನೀಡಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು. ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ನೀಡಲಾಗುವುದು. ಒಟ್ಟಾರೆ 25 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು.