ಲೋಕಸಭಾ ಸಾರ್ವತ್ರಿಕ ಚುನಾವಣೆ:ಮದ್ಯ ಮಾರಾಟ ನಿಷೇಧಿಸಿ ಡಿ.ಸಿ. ಆದೇಶ
ಕಲಬುರಗಿ:ಏ.12:ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೇ 7ರಂದು ನಡೆಯುವ ಮತದಾನ ಮತ್ತು ಜೂನ್ 4 ರಂದು ನಡೆಯುವ ಮತ ಎಣಿಕೆ ಸಂದರ್ಭದಲ್ಲಿ ಕ್ರಮವಾಗಿ ಮತದಾನ ಮುಕ್ತಾಯವಾಗುವ 48 ಗಂಟೆಗಳ ಅವಧಿಯೊಳಗಿನ ದಿನಗಳು ಮತ್ತು ಮತ ಎಣಿಕೆ ದಿನದಂದು ಮದ್ಯಮಾರಾಟ ನಿಷೇಧಿಸಿ ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.
ಮತದಾನ ಮುಕ್ತಾಯದ ಕೊನೆಯ 48 ಗಂಟೆ ಅವಧಿಯಲ್ಲಿ ಅಂದರೆ ಮೇ 5ರ ಸಂಜೆ 5 ಗಂಟೆಯಿಂದ ಮೇ 7ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಜೂನ್ 4 ರಂದು ನಡೆಯುವ ಮತ ಎಣಿಕೆ ಹಿನ್ನೆಲೆಯಲ್ಲಿ ಜೂನ್ 3ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 4ರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯ ಮಾರಾಟ, ಶೇಖರಣೆ, ಮದ್ಯಪಾನ ನಿಷೇಧಿಸಿ ಜನತಾ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 135 (ಸಿ) ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳು ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10 (ಬಿ) ರಂತೆ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಬಾರ್‍ಗಳು, ಕ್ಲಬ್‍ಗಳು, ಬಾರ್ ಮತ್ತು ರೆಸ್ಟೋರೆಂಟ್, ಮದ್ಯದ ಡೀಪೋಗಳನ್ನು (ಕೆ.ಎಸ್.ಬಿ.ಸಿ.ಎಲ್. ಕಲಬುರಗಿ ನಗರ ಹಾಗೂ ಜಿಲ್ಲೆ ಒಳಗೊಂಡಂತೆ) ಮುಚ್ಚಲು ಮತ್ತು ಮದ್ಯದ ಮಾರಾಟ, ಸಾಗಾಟ ನಿಷೇಧಿಸಿ ಶುಷ್ಕ ದಿನಗಳೆಂದು ಘೋಷಿಸಲಾಗಿದೆ. ಇದನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಜನತಾ ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1951ರ ಕಲಂ 135ಸಿ (2) ಮತ್ತು (3) ರನ್ವಯ ಶಿಕ್ಷೆಗೆ ಒಳಪಡಿಸಲಾಗುವುದೆಂದು ಆದೇಶದಲ್ಲಿ ತಿಳಿಸಲಾಗಿದೆ.