ರಾಜ್ಯ ಸರ್ಕಾರ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಬೇಕು: ಡಾ. ರಾಜಶೇಖರ್ ಶಿವಾಚಾರ್ಯರು
ಬೀದರ:ಏ.12:ಜಾಗತಿಕ ಮಹಿಳೆಯರ ಆತ್ಮಬಲದ ಸಂಕೇತಳಾಗಿರುವ ವೈರಾಗ್ಯನಿಧಿ ಶ್ರೀ ಅಕ್ಕಮಹಾದೇವಿಯ ಜಯಂತಿಯನ್ನು ರಾಜ್ಯ ಸರ್ಕಾರ ಸಾರ್ವತ್ರಿಕವಾಗಿ ಆಚರಿಸಬೇಕೆಂದು ಚೈತನ್ಯ ಪೀಠದ ಸಂಚಾಲಕರಾದ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಒತ್ತಾಯಿಸಿದರು. ಶ್ರೀಶೈಲದ ಯುಗಾದಿ ಮಹಾಪರ್ವದಲ್ಲಿ ಶ್ರೀ ಅಕ್ಕಮಹಾದೇವಿ 1 ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ಹನ್ನೆರಡನೆ ಶತಮಾನದ ಬಸವಾದಿ ಶಿವಶರಣರಲ್ಲಿ ಅಗ್ರ ಗಣ್ಯ ಟಾಪ್ ಐದರಲ್ಲಿ ಒಬ್ಬರಾಗಿರುವ ಅಕ್ಕಮಹಾದೇವಿಯ ಬದುಕು ಜಾಗತಿಕ ಮಹಿಳೆಯ ಅಸ್ಮಿತೆ, ದೈರ್ಯ, ಸ್ಥೈರ್ಯ ಮತ್ತು ಸ್ವಾಭಿಮಾನದ ಪ್ರೇರಣೆಯ ಪ್ರತೀಕವಾಗಿದೆ. ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯ ಮೆಟ್ಟಿನಿಂತು ಜಾಗತಿಕ ಧೀರ ಮಹಿಳೆಯಾಗಿ ಮಹಾದೇವಿಯಕ್ಕ ಎದ್ದು ಕಾಣುವರು. ಮಹಿಳೆಯು ಸ್ವಾಭಿಮಾನಿ, ಸ್ವಾವಲಂಬಿ ಯಾಗಬೇಕೆಂಬುದಕ್ಕೆ ಅಕ್ಕ ಓರ್ವ ಜ್ವಲಂತ ಉದಾಹರಣೆಯಾಗಿರುವರು. ಭಕ್ತಿ ಜ್ಞಾನ ಜೊತೆಗೆ ವೈರಾಗ್ಯದಲ್ಲಿಯೂ ಅಕ್ಕ ಮೇರುಗಿರಿಯಾಗಿ ನಿಂತರುವರು ಅಕ್ಕಳ ವಚನಗಳು ಆಧ್ಯಾತ್ಮದ ಉತ್ತುಂಗ ಜ್ಞಾನಗಂಗೆಯಾಗಿವೆ, ತಮ್ಮ ಘನ ವ್ಯಕ್ತಿತ್ವದಿಂದ ಶರಣರ ಗೌರವಕ್ಕೆ ಪಾತ್ರಳಾಗಿರುವ ಅಕ್ಕ ಸಾಕ್ಷಾತ ಶಕ್ತಿ ಸ್ವರೂಪಿಣಿ ಎಂದೆನಿಸಿಕೊಂಡಿರುವರು. ಕನ್ನಡದ ಮೊಟ್ಟ ಮೊದಲ ಕಮಿತ್ರಿಯ ಗೌರವಕ್ಕೆ ಭಾಜನವಾಗಿರುವ ಮಹಾದೇವಿಯಕ್ಕಳ ಘನ ವ್ಯಕ್ತಿತ್ವ ಸಾರ್ವಕಾಲಿಕ ಆದರ್ಶ ಪ್ರಾಯವಾಗಿರುವುದು, ಇಂತಹ ಮಹಾನ ಕನ್ನಡ ಕುವರಿ ಮಹಾಶಿವಶರಣೆ ಅಕ್ಕ ಮಹಾದೇವಿ ಜಯಂತಿಯನ್ನು ಕರ್ನಾಟಕ ಸರ್ಕಾರ ಆಚರಿಸುವ ಮೂಲಕ ಕನ್ನಡ ಮೊದಲ ಕವಿತ್ರಿಗೆ ಗೌರವ ನೀಡಬೇಕು. ಶರಣರಿಗೆ ಬಸವಣ್ಣನವರು ಅಗ್ರಗಣ್ಯ ನಾಯಕರಿರುವಂತೆ ಶರಣಿಯರಿಗೆ ಮಹಾದೇವಿಯಕ್ಕ ನವರು ನಾಯಕರಾಗಿರುವರು. ಜಗತ್ತಿಗೊಬ್ಬ ಅಣ್ಣ ಬಸವಣ್ಣನಾದರೆ ಜಗತ್ತಿಗೊಬ್ಬ ಅಕ್ಕಳೆಂದರೆ ಮಹಾದೇವಿ ಅಕ್ಕ. ಆದ್ದರಿಂದ ಅಕ್ಕಳ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಶ್ರೀಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿಗಳಾದ ‘ತಪೋರತ್ನ’ ಪೂಜ್ಯ ಶ್ರೀ ಕರುಣಾದೇವಿ ಮಾತಾರವರು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದರು.
ಭವ್ಯ ಅಡ್ಡ ಪಲ್ಲಕಿ ಮೆರವಣಿಗೆ:
ಇದಕ್ಕೂ ಮುಂಚೆ ಪೂಜ್ಯ ಶ್ರೀ ಮಾತಾ ಅವರ ಸದೀಚ್ಛೆ ಮತ್ತು ಸಂಕಲ್ಪದಂತೆ ಪ್ರಪ್ರಥಮ ಬಾರಿಗೆ ಶ್ರೀಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಪರ್ವದಂದು ಶ್ರೀ ಅಕ್ಕ ಮಹಾದೇವಿಯ ನೂತನ ಅಡ್ಡ ಪಲ್ಲಕಿ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಲ್ಪಟ್ಟಿತು. ಚೈತನ್ಯ ಪೀಠದದಲ್ಲಿ ಪೂಜ್ಯ ಅಮ್ಮನವರು ಪೂಜೆಯನ್ನು ನೆರವರಿಸಿ ಅಕ್ಕಮಹಾದೇವಿ ಅಡ್ಡ ಪಲ್ಲಕ್ಕಿ ಮೆರವಣಿಗೆಗೆ ಚಾಲನೆಯನ್ನು ನೀಡಿದರು. ಚೈತನ್ಯ ಪೀಠದಿಂದ ಹೊರಟ ಈ ಐತಿಹಾಸಿಕ ಅಡ್ಡ ಪಲ್ಲಕ್ಕಿ ಉತ್ಸವವು ಬಯಲು ವೀರಭದ್ರಸ್ವಾಮಿ ಮಂದಿರ, ಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯ, ನಂದಿಸರ್ಕಲ್ ಮಂದಿರವನ್ನು ಹಾಯ್ದು ಚೈತನ್ಯ ಪೀಠವನ್ನು ತಲುಪಿತು. ಮೆರವಣಿಗೆಯುದ್ದಕ್ಕೂ ಮಾರ್ಗಮಧ್ಯದಲ್ಲಿ ಸಾವಿರಾರೂ ಭಕ್ತರು ಅಕ್ಕಳ ದರ್ಶನ ಪಡೆದರು. ಪುರವಂತರು ಸಮ್ಮಾಳ ಮೇಳ ಭಜನೆ ತಂಡಗಳು ಮೆರವಣಿಗೆಯಲ್ಲಿದ್ದು ಶೋಭೆ ಹೆಚ್ಚಿಸಿದರು. ಬೀದರ ಜಿಲ್ಲೆಯ ನೂರಾರು ಜನ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ ಪೂಜಾರಿ, ಮಲ್ಲಯ್ಯ ಮುತ್ತಂಗಿ, ದೇವಕ್ಕ ಮರೂರ, ಧನ್ನೂರಿನ ಗಂಗಾಧರ ಸ್ವಾಮಿ, ಶಿವಕುಮಾರ ಸಂಗೊಳಗಿ, ವಿಶ್ವನಾಥ ದಾನಿ, ಅನಂತ ಸ್ವಾಮಿ, ಗುರುದೇವ, ಸಂತೋಷ ಗಾದಗಿ, ಕಾಶಿನಾಥ ಬಿರಾದಾರ, ತರನಳ್ಳಿಯ ಪ್ರಭು ಮೆಳಕುಂದಾ, ಕುಪೇಂದ್ರ ಹಾವಶೆಟ್ಟಿ, ಜಗನ್ನಾಥ ಹಾವಶೆಟ್ಟಿ, ಪ್ರಶಾಂತ ಲದ್ದೆ, ಮಹಾದೇವ ಲದ್ದೆ, ಸುನೀಲ ಹಾವಶೆಟ್ಟಿ, ಗುರು ಬಿರಾದಾರ, ರವಿ ವಾಡಿ, ಅನೀಲ ಕೆಂಚಗೊಂಡ ಮುಂತಾದ ಗಣ್ಯರು ಇದ್ದರು.