ಎಸ್ ಯುಸಿಐ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೨; ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಮ್ಯೂನಿಸ್ಟ್ ಪಕ್ಷದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಾಮ್ರೇಡ್ ಅಣಬೇರು ತಿಪ್ಪೇಸ್ವಾಮಿಯವರು ನಗರದ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿರುವ ಭಗತ್ ಸಿಂಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಸ್ವಾರ್ಥದ ರಾಜಕಾರಣ ನಡೆಯುತ್ತಿದೆ. ಇದಕ್ಕೆ ಪರ್ಯಾಯ ಶಕ್ತಿಯಾಗಿರುವ ಜನಗಳ ನೈಜ ಹೋರಾಟದ ಪಕ್ಷ ಎಸ್ ಯುಸಿಐ. ಭಗತ್ ಸಿಂಗ್ ನೇತಾಜಿಯವರ ನಿಸ್ವಾರ್ಥ ರಾಜಕಾರಣವನ್ನು ಜನರೆಡೆಗೆ ಕೊಂಡೊಯ್ಯಲು ಮತ್ತು ಬಂಡವಾಳಿಗರ ಬಾಲಂಗೋಚಿ ಪಕ್ಷಗಳನ್ನು ಸೋಲಿಸಲು ಜನ ತಮಗೆ ಮತನೀಡಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜ್ಯಸಮಿತಿಯ ಸದಸ್ಯರಾದ ಕಾಮ್ರೇಡ್ ಬಿ ಆರ್ ಅಪರ್ಣ, ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಮಂಜುನಾಥ್ ಕೈದಾಳೆ, ಜಿಲ್ಲಾಸಮಿತಿಯ ಸದಸ್ಯರುಗಳಾದ ಮಧು ತೊಗಲೇರಿ, ಮಂಜುನಾಥ್ ಕುಕ್ಕವಾಡ, ಕಾರ್ಯಕರ್ತರು ಹಾಗೂ ಪಕ್ಷದ ಬೆಂಬಲಿಗರು ಉಪಸ್ಥಿತರಿದ್ದರು. ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಸತ್ಯದ  ಹೆಸರಿನಲ್ಲಿ ಪ್ರಮಾಣ ಮಾಡಿ ನಾಮಪತ್ರ ಸಲ್ಲಿಸಿದರು.