ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸಿ ಮಾನವೀಯತೆ ಮೆರೆದ; ಹಾರುನ್ ಸಾಬ್
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.12: ಈ ವರ್ಷ ತೀವ್ರ ಬರಗಾಲ ಎದುರಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ನೀರು  ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಚೌಧರಿ ಹಾರುನ್ ಸಾಬ್.
ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಿ ನೀರು ಸಂಗ್ರಹಿಸಿ ರಸ್ತೆಯ ಬದಿ ಇರುವ ಬಿಡಾಡಿ ದನಕರಗಳಿಗೆ, ಬೀದಿ ನಾಯಿಗಳಿಗೆ, ಪಕ್ಷಿ ಸಂಕುಲಗಳಿಗೆ ನೀರು  ಒದಗಿಸುವ ಮೂಲಕ ಕುಡಿಯುವ ನೀರಿನ ಅರವಟಿಕೆ ಕೇಂದ್ರವನ್ನು ಪ್ರಾರಂಭಿಸಿ ಸಾಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ.
ಬೇಸಿಗೆ ಬಂತೆಂದರೆ ತಾಲ್ಲೂಕಿನ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಜಲಮೂಲಗಳು, ನೀರಿನ ಸಂಗ್ರಹಗಳು ಬರಿದಾಗಿ, ಜನಜಾನುವಾರು ಮತ್ತು ಪಕ್ಷಿಗಳು ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ತಮ್ಮ ಸ್ವಂತ ಖರ್ಚಿನಿಂದ ಸಿಮೆಂಟಿನ ತೊಟ್ಟಿಗಳನ್ನು ಖರೀದಿಸಿ, ನಿತ್ಯ 300 ರೂಪಾಯಿಗಳನ್ನು ಕೊಟ್ಟು ನೀರನ್ನು ಖರೀದಿಸಿ ಸಂಗ್ರಹಿಸಲಾಗುತ್ತದೆ. ಬಿದಿರಿನ ತಟ್ಟೆಯನ್ನು ನೀರಿನ ತೊಟ್ಟಿಯ ಸುತ್ತಾ ನಿರ್ಮಿಸಿರುವುದರಿಂದ ನೀರು ತಂಪಾಗಿಸಲು ಸಾಧ್ಯವಾಗುತ್ತದೆ.
ಈ ಬಾರಿ ಬಿರು ಬಿಸಿಲಿನಿಂದ ಅಣೆಕಟ್ಟೆಗಳಲ್ಲಿ, ಕೆರೆ ಕಟ್ಟೆಗಳಲ್ಲಿ ನೀರು ಇಲ್ಲವಂತ್ತಾಗುತ್ತದೆ. ತಾಪಕ್ಕೆ ಪ್ರಾಣಿ, ಪಕ್ಷಿಗಳು ನೀರನ್ನು ಆರಿಸಿ ಪರಿತಪಿಸುತ್ತಿವೆ. ಆಹಾರ ಸಿಗದೆ ಪರದಾಡುತ್ತಿವೆ. ಮಾನವೀಯತೆಯಿಂದ ಅವುಗಳ ರಕ್ಷಣೆಗೆ ಎಲ್ಲರೂ ಮುಂದಾಗ ಬೇಕಾಗಿದೆ. ಇದರಿಂದ ಅವುಗಳ ಸಂಕುಲ ಉಳಿಯುತ್ತವೆ.
ಬಿಸಿಲ ಧಗೆಯಿಂದ ಬಾಯಾರಿ ಬಂದ ದನಕರುಗಳು, ನಾಯಿಗಳು, ಪಕ್ಷಿಗಳು ಇಲ್ಲಿ ಸ್ವಲ್ಪ ಹೊತ್ತು ತಂಗಿ, ಇಲ್ಲಿ ಇಡಲಾದ ತಂಪಾದ ಕುಡಿಯುವ ನೀರನ್ನು ಸೇವಿಸಿ ದಾಹ ತೀರಿಸಿಕೊಂಡು ತಣಿಸಿಕೊಳ್ಳುತ್ತವೆ.
– ಮನುಷ್ಯರು ವಿವಿಧ ಬಗೆಯ ತಂಪು ಪಾನಿಯಗಳ ಮೋರೆ ಹೋಗುತ್ತಾರೆ, ಆದರೆ ಪ್ರಾಣಿ ಮತ್ತು ಪಕ್ಷಿಗಳು ನೀರಿಗಾಗಿ ಅಲೆದಾಡುವುದನ್ನು ತಪ್ಪಿಸಲು 6 ವರ್ಷಗಳಿಂದ ನಾನು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವ ಹಾಗೂ ಅವುಗಳ ಸಂಕಷ್ಟ ನಿವಾರಿಸಲು ಅಳಿಲು ಸೇವೆ ಕಾರ್ಯವನ್ನು ಕೈಕೊಂಡಿದ್ದೇನೆ, ಮಳೆಗಾಲದ ವರೆಗೂ ಈ ನೀರಿನ ಅರವಟಿಕೆ ಇರುತ್ತದೆ ಎಂದು ನಗರದ ಸಮಾಜ ಸೇವಕ ಚೌಧರಿ ಹಾರುನ್ ಸಾಬ್ ತಿಳಿಸಿದರು.
ಇಳಿ ವಯಸ್ಸಿನಲ್ಲಿ ಮೊಮ್ಮಕಳನ್ನು ನೋಡಿ ಕೊಂಡು ಇರುವವರ ಮಧ್ಯೆ, ತಮ್ಮ ಇಂತಹ ವಯಸ್ಸಿನಲ್ಲಿ ಚಿಕ್ಕ ಟೀ ಸ್ಟಾಲ್ ನಡೆಸುತ್ತಾ ಬಿಡಾಡಿ ದನಕರಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ತಂಪಾದ ಕುಡಿಯುವ ನೀರನ್ನು ಒದಗಿಸುವ ಈ ಸಮಾಜ ಸೇವೆ ಇಂದಿನ ಯುವಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಆದರ್ಶವಾಗಿದೆ ಎಂದು ಪ್ಯಾಟೇ ಆಂಜನೇಯ ದೇವಸ್ಥಾನದ ಗೋ ಶಾಲೆಯ ನಿರ್ವಾಹಕ ರಾಮಣ್ಣ ಹೇಳಿದರು.