ಮರಿಯಮ್ಮನಹಳ್ಳಿಯಲ್ಲಿ ರಂಜಾನ್ ಆಚರಣೆ
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಏ.12: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತರ್(ರಂಜಾನ್) ಹಬ್ಬವನ್ನು ಪಟ್ಡಣ ಸೇರಿದಂತೆ ಹೋಬಳಿಯಾದ್ಯಂತ ಸಡಗರ ಸಂಭ್ರಮದಿದ ಆಚರಿಸಿದರು.
ರಂಜಾನ್ ಪ್ರಯುಕ್ತ ಮರಿಯಮ್ಮನಹಳ್ಳಿ ಹೋಬಳಿಯಾದ್ಯಂತ ಮಸೀದಿಗಳನ್ನು ವಿಶೇಷವಾಗಿ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡಾ ಮುಸ್ಲಿಂ ಬಾಂಧವರು ಅದ್ದೂರಿಯಾಗಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ  ಆಚರಿಸಿದರು.
ಹ.ಬೊ.ಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಒಟ್ಟುಗೂಡಿದ ಸಾವಿರಾರು ಅಯ್ಯನಹಳ್ಳಿಯ ಮುಸ್ಲಿಂ ಬಾಂಧವರು ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿದ್ದರೂ ಲೆಕ್ಕಿಸದೇ ಬೆಳಿಗ್ಗೆ 10ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಮಕ್ಕಳು ಸೇರಿ ಎಲ್ಲಾ ವಯೋಮಾನದವರು ಹೊಸಬಟ್ಟೆಗಳನ್ನು ಧರಿಸಿ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿ, ಒಂದು ತಿಂಗಳ ಉಪವಾಸ ವ್ರತವನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣದ ಪಿ.ಎಸ್.ಐ. ಮೌನೇಶ ರಾಥೋಡ್ ಮತ್ತು ಸಿಬ್ಬಂದಿಗಳು ಸೂಕ್ತ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.