ಟಾಪರ್ ಗೆ ಲ್ಯಾಪ್ ಟಾಪ್ ನೀಡಿ ಉನ್ನತ ಶಿಕ್ಷಣಕ್ಕೆ  ಪ್ರೋತ್ಸಾಹಿಸಿದ ಶಾಸಕ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.12 :- ಪಿಯುಸಿ ಕಲಾ ವಿಭಾಗದಲ್ಲಿ 600  ಅಂಕಗಳಿಗೆ 596 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿರುವ ಕೊಟ್ಟೂರು ಇಂದು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಅವರ ಸ್ವಗ್ರಾಮ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ,ಇದು ನಮ್ಮ ಹೆಮ್ಮೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ಗ್ರಾಮದ ಆ ವಿದ್ಯಾರ್ಥಿನಿ ಮನೆಗೆ ಭೇಟಿ ಟಾಪರ್ ಕವಿತಾಗೆ ಅತ್ಯಾಧಿಕ ವೆಚ್ಚದ ಲ್ಯಾಪ್ ಟಾಪ್ ನೀಡಿ ಹೆಚ್ಚಿನ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಶಾಸಕರು  ಪ್ರೋತ್ಸಾಹದ ಬೆನ್ನು ತಟ್ಟಿದ್ದಾರೆ.
ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ತಂದೆ ರೈತ, ತಾಯಿ ಟೈಲರ್ ವೃತ್ತಿ ಮಾಡಿ ಬಡತನದಲ್ಲೂ  ಮಗಳ ಶಿಕ್ಷಣಕ್ಕೆ ಕೊರತೆಯಾಗದಂತೆ ಶ್ರಮಿಸಿ ಇಂದು ಕಾಲೇಜಿಗೆ ಸೇರಿಸಿದ್ದು ಸಾರ್ಥಕವೆಂಬಂತೆ ಮಗಳು ತಂದೆ ತಾಯಿಯ ಹೆಸರು ಉಳಿಸುವ ಜೊತೆಗೆ ಇಡೀ ರಾಜ್ಯಕ್ಕೆ ಕೂಡ್ಲಿಗಿ ತಾಲೂಕಿನ ಹೆಸರನ್ನು ತರುವ  ಕೀರ್ತಿಯ  ಟಾಪರ್ ಆಗುವ ಸಾಧಕಿಯಾಗಿದ್ದಾಳೆ. ಇದು ನಮ್ಮ ಹೆಮ್ಮೆ ನಮ್ಮ ತಾಲೂಕು ಎನ್ನುವ ನಿಟ್ಟಿನಲ್ಲಿ ಕೂಡ್ಲಿಗಿ ಶಾಸಕರು ಮಾತನಾಡುತ್ತ ಕಡುಬಡತನದಲ್ಲೂ ಸಾಧನೆ ಮಾಡಿ ತೋರಿಸಿದ ಕವಿತಾಗೆ ಅತ್ಯಾಧಿಕ ವೆಚ್ಚದ ಲ್ಯಾಪ್ ಟಾಪ್ ನೀಡಿ ಬಡತನವೆಂದು ನಿನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೇ ಉನ್ನತ ಶಿಕ್ಷಣ ಪಡೆದುಕೋ ನಿನ್ನ ಜೊತೆ ನಾವಿದ್ದೇವೆ ಪಿಯುಸಿಯಲ್ಲಿ ಸಾಧನೆ ಮಾಡಿದಂತೆ ಉನ್ನತ ವ್ಯಾಸಂಗದಲ್ಲೂ ಟಾಪರ್ ಆಗಿ ತಾಲೂಕಿನ ಹೆಮ್ಮೆ ಪುತ್ರಿಯಾಗು ಎಂದು ಹೆಚ್ಚಿನ ಶಿಕ್ಷಣ ಕೊಡಿಸುವ ಬಗ್ಗೆ  ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಕವಿತಾಳ ತಂದೆತಾಯಿಸೇರಿದಂತೆ ಕೂಡ್ಲಿಗಿ ಪ ಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಕಾಂಗ್ರೆಸ್ ಮುಖಂಡ ಟಿ ಜಿ ಮಲ್ಲಿಕಾರ್ಜುನಗೌಡ ಮತ್ತು  ಚೌಡಾಪುರ ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.