ಸಂಸದನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ
ರಾಯಚೂರು,ಏ.೧೨- ಕಳೆದ ೫ ವರ್ಷಗಳಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ೩೫ ಸಾವಿರ ಕೋಟಿ ಅನುದಾನದ ಯೋಜನೆಗಳನ್ನು ತಂದ ತೃಪ್ತಿ ಇದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಅವರು ಇಂದು ಸಂಜೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡುತ್ತ ನರೇಂದ್ರ ಮೋದಿಯವರ ನಾಯಕತ್ವದ ಸರ್ಕಾರದಲ್ಲಿ ಕೆಲಸ ಮಾಡಿದ ಸಂತೋಷ ನನಗಿದೆ. ಸುಧೀರ್ಘ೩೫ ವರ್ಷಗಳ ರಾಜಕೀಯ ಅನುಭವ ನನಗಿದೆ. ರಾಯಚೂರು ಯಾದಗಿರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಹಗಲಿರಳು ಕೆಲಸ ಮಾಡಿರುತ್ತೇನೆ.ಲೋಕಸಭಾ ಕ್ಷೇತ್ರ ವ್ಯಾಪ್ತಿ ದೊಡ್ಡದಿದೆ. ಹೀಗಾಗಿ ಸಾರ್ವಜನಿಕ ಸಂಪರ್ಕ ಕಡಿಮೆ ಇದೆ ಎನ್ನುವ ಆರೋಪ ಇದೆ ಆದರೆ ನಾನು ಯಾವತ್ತೂ ಜನರ ಕೆಲಸಗಳಿಗಾಗಿ ದುಡಿಯುತ್ತಿದ್ದೇನೆ. ನಮ್ಮ ಜಿಲ್ಲೆಗೆ ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ರವರ ಕೊಡುಗೆ ಯಾರೂ ಮರೆಯುವಂತಿಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳು ತಾತ್ಕಾಲಿಕ ಮಾತ್ರ ಆದರೆ ನರೇಂದ್ರ ಮೋದಿ ರವರು ದೇಶದ ಜನಕ್ಕೆ ಶಾಶ್ವತ ಕೊಡುಗೆ ನೀಡುತ್ತಿದ್ದಾರೆ. ಈ ಚುನಾವಣೆ ಬಿಜೆಪಿ ಜೊತೆಗೆ ಜೆಡಿಎಸ್ ಜೊತೆ ಆಗಿರುವುದರಿಂದ ನನ್ನ ಗೆಲವು ಖಚಿತ ಎಂದು ನನಗೆ ಹೆಚ್ಚಿನ ಆತ್ಮವಿಶ್ವಾಸವಿದೆ ಎಂದರು.
ಸಮಾರಂಭದಲ್ಲಿ ಸಸಿಗೆ ನೀರುಣಿಸಿ ಉದ್ಘಾಟನೆ ಮಾಡಿದ ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಎನ್.ಶಂಕ್ರಪ್ಪ ವಕೀಲರು ಮಾತನಾಡುತ್ತ ಈ ಚುನಾವಣೆಯಲ್ಲಿ ಕರ್ನಾಟಕ೨೮ ಕ್ಕೆ ೨೮ ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಗೆಲುವು ಸಾಧಿಸುತ್ತದೆ. ಎರಡು ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟ ಆಗುತ್ತದೆ ಎಂದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ ಕೇಂದ್ರದ ನಾಯಕರ ಮೈತ್ರಿ ಧರ್ಮ ಪಾಲಿಸುತ್ತ ರಾಜಾ ಅಮರೇಶ್ವರ ನಾಯಕ ರವರ ಗೆಲುವಿಗೆ ಬಿಜೆಪಿ ಜೊತೆಗೆ ಜೆಡಿಎಸ್ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
ನಗರ ಶಾಸಕರೂ ಜಿಲ್ಲಾ ಬಿಜೆಪಿ ಅಧ್ಯಕ್ಷರು ಆದ ಡಾ.ಎಸ್.ಶಿವರಾಜ ಪಾಟೀಲ್ ಮಾತನಾಡಿ ಪಕ್ಷದ ನಾಯಕರುಗಳಿಗಿಂತ ಪಕ್ಷದ ಕಾರ್ಯಕರ್ತರೇ ನಮಗೆ ಜೀವಾಳ ನೀವುಗಳು ನಿಮ್ಮ ನಿಮ್ಮ ಬಡಾವಣೆಯಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಜೊತೆಗೂಡಿ ಕೆಲಸ ಮಾಡಬೇಕಿದೆ ಆಗ ನಾವು ಮತ್ತೊಮ್ಮೆ ರಾಜಾ ಅಮರೇಶ್ವರ ನಾಯಕ ರವರನ್ನು ಗೆಲ್ಲಿಸಬಹುದಾಗಿದೆ. ಈ ಬಾರಿ ಗೆದ್ದರೆ ಬುರು ದಿನಗಳಲ್ಲಿ ಮೋದಿ ಸರ್ಕಾರದಲ್ಲಿ ಅಮರೇಶ್ವರ ನಾಯಕ ಮಂತ್ರಿ ಆಗುವ ಸಾಧ್ಯತೆ ಇವೆ ಎಂದರು.
ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮಹಾಂತೇಶ ಪಾಟೀಲ ಅತ್ತನೂರು, ಎನ್.ಶಿವಶಂಕರ ವಕೀಲರು ಮಾತನಾಡಿದರು. ಮಾಜಿ ಶಾಸಕ ಎ.ಪಾಪಾರೆಡ್ಡಿ, ಶಿವಬಸ್ಸಪ್ಪ ಮಾಲಿ ಪಾಟೀಲ, ನಗರ ಮಂಡಲ ಅಧ್ಯಕ್ಷ ಊಟ್ಕೂರು ರಾಘವೇಂದ್ರ, ರಾಜಕುಮಾರ, ಕಡಗೋಲು ಆಂಜನೇಯ, ಬಿ.ಗೋವಿಂದ, ವೈ.ಗೋಪಾಲ ರೆಡ್ಡಿ, ಜಿ.ತಿಮ್ಮಾರೆಡ್ಡಿ, ರಮಾನಂದ ಯಾದವ, ಈ. ಶಶಿರಾಜ, ಎನ್.ಕೆ. ನಾಗರಾಜ, ಶ್ರೀನಿವಾಸ ರೆಡ್ಡಿ, ಗಾಣಧಾಳ ಲಕ್ಷೀಪತಿ, ಪೋಗಲ ಶ್ರೀನಿವಾಸ, ಶರಣಮ್ಮ ಕಾಮರೆಡ್ಡಿ, ಲಲಿತಾ ಕಡಗೋಲ, ವಿಜಯ ಕುಮಾರ ಸಜ್ಜನ ಸೇರಿದಂತೆ ಬಿಜೆಪಿ ಜೆಡಿಎಸ್ ಪಕ್ಷದ ವಿವಿಧ ನಾಯಕರುಗಳು ಉಪಸ್ಥಿತಿ ಇದ್ದರು. ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಕಡಗೋಲು ರಾಮಚಂದ್ರ, ಪಲುಗುಲ ನಾಗರಾಜ ನಿರೂಪಿಸಿದರು.