ಪರವಾನಿಗೆ ಇಲ್ಲದೇ ಕಟ್ಟಡ ನಿರ್ಮಾಣ, ತೆರವಿಗೆ ಆಗ್ರಹ
ರಾಯಚೂರು.ಏ.೧೨- ನ್ಯಾಯಾಲಯದಲ್ಲಿ ಇರುವ ವಿವಾದಿತ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕಟ್ಟಡ ನಿರ್ಮಿಸಲಾಗುತ್ತಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಅಂಬಾಜಿ ರಾವ್ ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ರಾಯಚೂರು ನಗರದ ಮಹಿಳಾ ಸಮಾಜ ಎದುರುಗಡೆ ಇರುವ ಹೆಚ್.ಆರ್.ಬಿ ಲೇಔಟ್‌ನಲ್ಲಿ ಪ್ರವೇಶ ದ್ವಾರದ ಎಡಭಾಗದಲ್ಲಿರುವ ಖಾಲಿ ಜಾಗದಲ್ಲಿ ಯಾವುದೇ ರೀತಿಯ ಅನುಮತಿ ಹಾಗೂ ಪರವಾನಿಗೆ ಪಡೆಯದೇ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವುದು ಕಾನೂನು ಬಾಹೀರವಾಗಿದೆ. ಆದ್ದರಿಂದ ಕೂಡಲೇ ನಿರ್ಮಿಸುತ್ತಿರುವ ಶೆಡ್ ಗಳನ್ನು ನೆಲಸಮ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನ್ಯಾಯಾಲಯದಲ್ಲಿ ಇನ್ನು ಇತ್ಯರ್ಥವಾಗದ ಜಾಗದಲ್ಲಿ ಆಡು ಹಗಲೇ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದು ಹಾಗೂ ನಗರಸಭೆಯಿಂದ ಯಾವುದೇ ರೀತಿಯ ಪರವಾನಿಗೆ ಪಡೆಯದೇ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಕಾನೂನು ಬಾಹೀರವಾಗಿದ್ದು, ಹಾಗೂ ನಗರಸಭೆ ಅಧಿಕಾರಿಗಳು ನೋಡಿ ಕೂಡ ಕಣ್ಣುಮುಚ್ಚಿಕೊಂಡಿರುವುದು ನೋಡಿದರೆ ಈ ಅಕ್ರಮ ಕಟ್ಟಡಕ್ಕೆ ಅಧಿಕಾರಿಗಳು ಕೂಡ ಶಾಮೀಲಾಗಿರಬಹುದು ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ ಎಂದು ದೂರಿದರು.