ಓಝೋನ್ ಪದರನಾಶ ಆತಂಕಕಾರಿ
ಧಾರವಾಡ,ಸೆ.20: ಭೂಮಿಯ ಮೇಲೆ ಮಾನವ ಹಾಗೂ ಇತರ ಜೀವರಾಶಿಗಳಿಗೆ ರಕ್ಷಾ ಕವಚವಾದ ಓಝೋನ್ ಪದರು ವಾಯು ಮಾಲಿನ್ಯದಿಂದ ನಾಶವಾಗುತ್ತಿರುವದು ಆತಂಕಕಾರಿಯಾದ ಘಟನೆಯಾಗಿದೆ ಎಂದು ಮೊರಬ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಸೈಯದ್ ಫಯಾಜ್ ಅಹ್ಮದ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ಸುಳ್ಳದ ಶ್ರೀ ಶಿವಾನಂದ ಭಾರತಿ ಪ್ರೌಢ ಶಾಲೆಯಲ್ಲಿ ವಿಶ್ವ ಓಝೋನ್ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ `ಓಝೋನ್ ಪದರು ರಕ್ಷಣೆಯಲ್ಲಿ ಸಹಕಾರಯುತ ಪ್ರಯತ್ನ’ ಉಪನ್ಯಾಸ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಓಝೋನ್ ಪದರು ನಾಶವಾಗಲು ಮಾನವ ನಿರ್ಮಿತ ಕೈಗಾರಿಕೆಗಳು, ಏರ್‍ಕಂಡೀಷನರ್‍ಗಳು ನೇರ ಕಾರಣವಾಗಿದ್ದು, ಅವುಗಳಿಂದ ಉತ್ಪತ್ತಿಯಾಗುವ ಸಿ.ಎಫ್.ಸಿ, ಓಝೋನ ರಂಧ್ರ ಬೀಳುವಂತೆ ಮಾಡಿದೆ. ಈ ಪದರು ನಾಶದಿಂದ ಮಾನವ ಕೋಟಿ ಸೇರಿದಂತೆ ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೆ ಮಾರಕವಾಗಿದೆ. ಸೂರ್ಯನಿಂದ ಬಿಡುಗಡೆಯಾಗುವ ಅತ್ಯಂತ ಅಪಾಯಕಾರಿ ಅತಿ ನೇರಳೆ ಕಿರಣಗಳು ನೇರವಾಗಿ ಭೂಮಿಗೆ ಅಪ್ಪಳಿಸುವುದರಿಂದ ದೇಹ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತದೆ. ಕುರುಡುತನ, ಚರ್ಮರೋಗದಂತಹ ಭೀಕರ ಕಾಯಿಲೆ ಉಂಟಾಗಿ ಮಣ್ಣು ನಿಸ್ಸಾರವಾಗಿ, ಬೆಳೆಹಾನಿ ಆಗುತ್ತಿದೆ. ಜೊತೆಗೆ ಸಕಲ ಜಲಚರ ಪ್ರಾಣಿಗಳು ಸತ್ತು ಹೋಗುತ್ತವೆ. ಈ ನಿಟ್ಟಿನಲ್ಲಿ ಸಿ.ಎಫ್.ಸಿ ನಿಯಂತ್ರಣ ಅಗತ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ಓಝೋನ ಪದರಿಗೆ ರಂಧ್ರ ಬಿದ್ದ ವಿಷಯ 1974 ರಲ್ಲೇ ಪತ್ತೆ ಹಚ್ಚಲಾಗಿದ್ದು, ಸಿ.ಎಫ್.ಸಿ ನಿಷೇಧಕ್ಕೆ ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳು “ಮಾಂಟ್ರಿಯಲ್ ಒಪ್ಪಂದ’ಕ್ಕೆ ಸಹಿ ಹಾಕಿವೆ. ಈಗಾಗಲೇ ಇದರ ದುಷ್ಪರಿಣಾಮದಿಂದ ಆಸ್ಟ್ರೇಲಿಯಾದಲ್ಲಿ ಗೋಧಿ ಬೆಳೆ ಸಂಪೂರ್ಣ ನಷ್ಟವಾಗಿದೆ. ಭವಿಷ್ಯದಲ್ಲಿ ಇದು ಗಂಡಾಂತರಕಾರಿಯಾಗಿದ್ದು ಅಮೂಲ್ಯ ಜೀವ ರಾಶಿಗಳ ರಕ್ಷಾ ಕವಚ ಓಝೋನ್ ರಕ್ಷಿಸುವಲ್ಲಿ ಅಂತಾರಾಷ್ಟ್ರೀಯ ಸಹಕಾರಯುತ ಪ್ರಯತ್ನ ಅಗತ್ಯವಾಗಿದೆ ಎಂದು ಹೇಳಿದರು.
ಸುಳ್ಳದ ಗ್ರಾಮ ಪಂಚಾಯತ ಅಧ್ಯಕ್ಷ ಶಿವಕಲ್ಲಪ್ಪ ದೇಮಕ್ಕನವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರೌಢ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಯಲ್ಲಪ್ಪ ಮಾದರ ಅಧ್ಯಕ್ಷತೆ ವಹಿಸಿದ್ದರು.
ಓಝೋನ್ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ಎಸ್. ಜಗತಾಪ ಸ್ವಾಗತಿಸಿದರು. ಪ್ರೊ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತ್ರಾ ಜಿ. ನಿರೂಪಿಸಿದರು. ಎಸ್.ಎಸ್. ಹೊಸಮನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಹಸಬಿ ಜಿ. ಎಸ್. ಮತ್ತು ಹಳ್ಳೂರ ಆರ್. ಬಿ. ಸೇರಿದಂತೆ ವಿದ್ಯಾರ್ಥಿಗಳು ಮುಂತಾದವರಿದ್ದರು.