ಕೇಂದ್ರ ಬಸ್ ನಿಲ್ದಾಣ: ಎನ್‌ಎಸ್‌ಎಸ್‌ದಿಂದ ಮತದಾನ ಜಾಗೃತಿ-ಪ್ರತಿಜ್ಞಾ ವಿಧಿ ಬೋಧನೆ
ರಾಯಚೂರು.ಏ.೧೨- ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ರಾಜ್ಯಶಾಸ್ತ್ರ ವಿಭಾಗ ಜಂಟಿಯಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಯುವ ನವ ಮತದಾರರು ತಪ್ಪದೇ ತಮ್ಮ ಮೊದಲ ಬಾರಿಯ ಮತದಾನದ ಹಕ್ಕನ್ನು ಚಲಾಯಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಬೃಹತ್ ಮತ್ತು ವ್ಯಾಪಕ ಮತದಾನ ಜಾಗೃತಿ ರಂಗೋಲಿ ಅಭಿಯಾನದ ಅಂಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿನಿ ಸ್ವಯಂ ಸೇವಕಿಯರಾದ ಪ್ರತಿಭಾ, ತಾಯಮ್ಮ, ದೀಪಾ, ಅಂಜಲಿ, ಸಂಗೀತಾ ಪಿ, ದೇವಮ್ಮ ಹಾಗೂ ಐಶ್ವರ್ಯಾ ಟಿ ಮತದಾನದ ಮಹತ್ವ ಸಾರುವ ಮತ್ತು ಕಡ್ಡಾಯವಾಗಿ ಮತದಾನ ಮಾಡುವಂತೆ ಸಂದೇಶ ನೀಡುವ ವರ್ಣರಂಜಿತ ಚಿತ್ತಾಕರ್ಷಕ ರಂಗೋಲಿಗಳನ್ನು ಬಿಡಿಸುವ ಮೂಲಕ ಪ್ರಯಾಣಿಕರ ಹಾಗೂ ಸಾರ್ವಜನಿಕರ ಕಣ್ಮನ ಸೆಳೆಯುವಂತೆ ಮಾಡಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಕೇಂದ್ರ ಬಸ್ ನಿಲ್ದಾಣದಲ್ಲಿ ನೆರೆದ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿ, ಇಡೀ ಪ್ರಪಂಚದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಬೃಹತ್ ಸಂಖ್ಯೆಯ ಮತದಾರರನ್ನು ಹೊಂದಿರುವ ದೇಶ ನಮ್ಮದು. ಮತದಾನದ ಹಕ್ಕನ್ನು ಪಡೆದಿರುವ ಪ್ರತಿಯೊಬ್ಬರೂ ಮತದಾನದ ದಿನದಂದು ತಪ್ಪದೇ ಮತದಾನ ಮಾಡಿದರೆ ಮತದಾನದ ಪ್ರಮಾಣ ಹೆಚ್ಚುತ್ತದೆ. ಗರಿಷ್ಠ ಮತದಾನ ಬಲಿಷ್ಠ ಪ್ರಜಾತಂತ್ರ ವ್ಯವಸ್ಥೆಗೆ ಅವಕಾಶ ಮಾಡಿಕೊಡುತ್ತದೆ. ಹಾಗಾಗಿ, ಮೇ.೭ ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಕೇಂದ್ರ ಬಸ್ ನಿಲ್ದಾಣದ ಪ್ರಭಾರಿ ಹಾಗೂ ಸಂಚಾರ ಪರೀಕ್ಷಾಧಿಕಾರಿ ಶ್ರೀ ಶೀಲಪ್ಪ ರವರ ಉಪಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ವರ್ಣ ರಂಜಿತ ಚಿತ್ತಾಕರ್ಷಕ ರಂಗೋಲಿಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವ ಈ ವಿನೂತನ ಅಭಿಯಾನಕ್ಕೆ ಸಾರಿಗೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಸ್ವಯಂ ಸೇವಕಿಯರ ಶ್ರಮದಾನವನ್ನು ಪ್ರಶಂಸಿಸಿದರು.
ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿನಿ ಸ್ವಯಂ ಸೇವಕಿಯರು ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಿಸಿದರು.