ನಿವೃತ್ತ ಎಸ್ಪಿ ಮನೆಕಳವು ನಾಲ್ವರು ಕನ್ನಗಳ್ಳರ ಸೆರೆ
ಬೆಂಗಳೂರು,ಏ.೧೨-ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ(ಎಸ್ ಪಿ)ಮೀಸೆ ನಾಗರಾಜ್ ಅವರ ಮನೆಗೆ ನುಗ್ಗಿ ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಕುಖ್ಯಾತ ರೌಡಿ ಸೇರಿ ನಾಲ್ವರು ಕನ್ನಗಳ್ಳರನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಗ್ಗೆರೆಯ ಚೌಡೇಶ್ವರಿ ನಗರದ ದೀಕ್ಷಿತ್ ಅಲಿಯಾಸ್ ದೀಕ್ಷಿ(೨೨)ಪೈಂಟರ್ ಕಾಲೋನಿಯ ಅಜಯ್ ಅಲಿಯಾಸ್ ಕ್ಯಾಟ್ (೨೨)ಲವಕುಶನಗರದ ಮಣಿಕಂಠ ಅಲಿಯಾಸ್ ಮಣಿ(೨೩)ಹಾಗೂ ಕುಣಿಗಲ್ ತಾಲ್ಲೂಕು ಅಮೃತೂರಿನ ಕೀರ್ತಿ(೩೦)ಬಂಧಿತ ಆರೋಪಿಗಳಾಗಿದ್ದು, ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.
ಬಂಧಿತ ಆರೋಪಿಗಳಿಂದ ೫೦ ಸಾವಿರ ನಗದು ಸೇರಿ ೨೮.೫೦ ಲಕ್ಷ ಮೌಲ್ಯದ ೪೭೦ ಗ್ರಾಂ ಚಿನ್ನ, ೫೦೦ ಗ್ರಾಂ ಬೆಳ್ಳಿ ಹಣ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಉತ್ತರಹಳ್ಳಿಯ ಬಿಹೆಚ್ ಸಿ.ಎಸ್ ಲೇಔಟ್ ನ ನಿವೃತ್ತ ಎಸ್ ಪಿ ಮೀಸೆ ನಾಗರಾಜ್ ಅವರ ಮನೆಯಲ್ಲಿ ಚಿನ್ನ-ಬೆಳ್ಳಿ ಒಡವೆಗಳು ಕಳ್ಳತನವಾಗಿರುವ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ನಡುವೆ ಲಗ್ಗೆರೆ ಮುಖ್ಯರಸ್ತೆಯಲ್ಲಿ ಜ್ಯೂವೆಲ್ಲರಿ ಅಂಗಡಿ ಮುಂಭಾಗ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು,ಅವರನ್ನು ಹಿಡಿದು ತಪಾಸಣೆ ನಡೆಸಿದಾಗ ಓರ್ವನ ಪ್ಯಾಂಟ್‌ಜೇಬಿನಲ್ಲಿ ಒಂದು ಜೊತೆ ಬೆಳ್ಳಿಯ ಕಾಲುಚೈನು ಹಾಗೂ ಮತ್ತೊಬ್ಬನ ಜೇಬಿನಲ್ಲಿ ಬೆಳ್ಳಿಯ ಉಡುದಾರವಿದ್ದು ಸರಿಯಾದ ಉತ್ತರವನ್ನು ನೀಡದೆ ತಡವರೆಸಿದ್ದು ಇದನ್ನು ಅರಿತ ಗಸ್ತಿನ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಅವರುಗಳು ತಮ್ಮ ಸಹಚರರಾದ ಬಂಧಿತ ಮತ್ತಿಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದು ಹಾಗೂ ಮತ್ತೋರ್ವ ವ್ಯಕ್ತಿಯು ರಿಸೀವರ್ ಆಗಿರುತ್ತಾನೆಂದು ಸಹ ತಿಳಿಸಿರುತ್ತಾರೆ.
ಕಳ್ಳತನ ಮಾಡಿದ ವ್ಯಕ್ತಿಯನ್ನು ಹಾಗೂ ರಿಸೀವರ್ ನನ್ನು ಬಂಧಿಸಿದಾಗ ಕಳ್ಳತನ ಮಾಡಿದ ವ್ಯಕ್ತಿಯು ರಾಜಗೋಪಾಲನಗರ ಪೊಲೀಸ್ ಠಾಣೆಯ ರೌಡಿಯಾಗಿರುತ್ತಾನೆ.
ಕಳ್ಳತನ ಮಾಡಿದ ವ್ಯಕ್ತಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಅವರುಗಳು ಉತ್ತರಹಳ್ಳಿ ಬಿಹೆಚ್ ಸಿಎಸ್ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಚಿನ್ನ-ಬೆಳ್ಳಿ ಒಡವೆಗಳು ಹಾಗೂ ಹಣವನ್ನು ಕಳುವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸೈದುಲು ಅಡಾವತ್ ನೇತೃತ್ವದಲ್ಲಿ, ರಾಜಗೋಪಾಲನಗರ ಪೊಲೀಸ್ ಇನ್ಸ್‌ಪೆಕ್ಟರ್ ಪುನೀತ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.