ಅಲ್ಲಮ ಪ್ರಭು ಜಯಂತಿ,ಯುಗಾದಿ ಕವಿಗೋಷ್ಠಿ
ವಿಜಯಪುರ.ಏ೧೨:ನಮ್ಮ ನಾಡಿನ ಅಧ್ಯಾತ್ಮಚೇತನದ ಜ್ಯೋತಿಯನ್ನು ಪ್ರಕಾಶಗೊಳಿಸಿದ ಅಲ್ಲಮಪ್ರಭುಗಳ ಬಗೆಗೆ ಹಾಗೂ ಆ ವಚನ ಕಾಲದ ನಮ್ಮ ಭವ್ಯ ಪರಂಪರೆಯನ್ನು ನೆನೆಯುತ್ತಿದ್ದರೆ ಎಲ್ಲರ ಮನಸ್ಸು ಪುಳಕಿತಗೊಳ್ಳುತ್ತದೆ.ಶಿಕ್ಷಕ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್‌ನ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಎಂ ಶಿವಕುಮಾರ್ ತಿಳಿಸಿದರು.
ಅವರು ಪಟ್ಟಣದ ಚೆನ್ನರಾಯಪ್ಪ ಲೇಔಟ್ ನಲ್ಲಿರುವ ಬಲಮುರಿ ಶ್ರೀನಿವಾಸ್ ಮೂರ್ತಿ ಸ್ವಗೃಹದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ವಿಜಯಪುರ ಲೀಜನ್ ಜೇಸಿಐ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಯುಗಾದಿ ಕವಿಗೋಷ್ಠಿ ಮತ್ತು ಅಲ್ಲಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ಅಲ್ಲಮಪ್ರಭು ಜಯಂತಿ ಬಗೆ ಉಪನ್ಯಾಸ ನೀಡುತ್ತಾ ೧೨ನೇ ಶತಮಾನ ಭಾರತದ ಇತಿಹಾಸದಲ್ಲಿಯೇ
ಧಾರ್ಮಿಕ ಸುವರ್ಣಕಾಲ. ಕರ್ನಾಟಕದ ಮಟ್ಟಿಗೆ ವಿಚಾರಕ್ರಾಂತಿಯ, ತನ್ಮೂಲಕ ಸಾಮಾಜಿಕ, ಸಾಹಿತ್ಯಿಕ ಕ್ರಾಂತಿ ವಿಜೃಂಭಿಸಿದ ಕಾಲ. ಕನ್ನಡನಾಡಿನ ಶರಣರ ಕೇಂದ್ರವಾದ ಕಲ್ಯಾಣದಲ್ಲಿ ರಾಜ್ಯವಾಳುತ್ತಿದ್ದ ಬಿಜ್ಜಳ ರಾಜನ ಮಂತ್ರಿಯಾಗಿ ದೇಶವನ್ನು ಸುಭಿಕ್ಷದೆಡೆಗೆ ಕೊಂಡೊಯ್ದ ಭಗವಾನ್ ಬಸವೇಶ್ವರರು ಈ ಕ್ರಾಂತಿಯ ಕೇಂದ್ರ ಬಿಂದು. ಈ ಕ್ರಾಂತಿ ದೀಪಕ್ಕೆ ತಾತ್ವಿಕ ನೆಲಗಟ್ಟನ್ನು ನೀಡಿ ಬೆಳಗಿಸಿದವರು ಅನುಪಮ ಚರಿತ ಅಲ್ಲಮಪ್ರಭುದೇವರು. ಬಸವಣ್ಣನವರು ಪ್ರತಿಪಾದಿಸಿದ ಸತ್ಯಶುದ್ಧ ಕಾಯಕ, ದಾಸೋಹಗಳು ಕಲ್ಯಾಣ ರಾಜ್ಯದ ಕೀರ್ತಿಯನ್ನು ನಾಡಿನಾದ್ಯಂತ ಬಿತ್ತರಿಸಿದವು. ಕಲ್ಯಾಣ ರಾಜ್ಯದಲ್ಲಿ ಆರ್ಥಿಕ ಕ್ರಾಂತಿಗೆ ಕಾರಣವಾಯಿತು. ಮೇಲುವರ್ಗದ, ಪುರೋಹಿತಶಾಹಿಗಳ ಸ್ವತ್ತಾಗಿದ್ದ ದೇವರು, ದೇವಾಲಯಗಳನ್ನು ಜನ ಸಾಮಾನ್ಯರ ಬಳಿಗೆ ತಂದು, ಇಷ್ಟ ಲಿಂಗಧಾರಣೆ ಮೂಲಕ ದೇಹವನ್ನೇ ದೇವಾಲಯವನ್ನಾಗಿಸಿದವರು ಭಗವಾನ್ ಬಸವೇಶ್ವರರು. ತಾವೇ ಏರಬಹುದಾಗಿದ್ದ ಶೂನ್ಯಪೀಠವನ್ನು, ಕೆಳವರ್ಗದಿಂದ ಬಂದ ಮದ್ದಳೆಕಾಯಕದ ಅಲ್ಲಮಪ್ರಭು ದೇವರನ್ನು ಪೀಠಾಧ್ಯಕ್ಷರನ್ನಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷರಾದ ಕೆ ವೆಂಕಟೇಶ್ ರವರು ವಹಿಸಿದರು
ಯುಗಾದಿ ಕವಿಗೋಷ್ಠಿಯಲ್ಲಿ ಮ ಸುರೇಶ್ ಬಾಬು, ಚಂದ್ರಶೇಖರ್ ಹಡಪದ್, ಎಸ್ ರಮೇಶ್, ಕೆಎನ್ ಜನಾರ್ಧನ್ ಕಾವ್ಯವಾಚನ ಮಾಡಿದರು
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ ಎಂ ಶಿವಕುಮಾರ್, ರಾಷ್ಟ್ರೀಯ ಸಂಯೋಜಕರಾದ ವಿ ವೆಂಕಟೇಶ್, ಎನ್ ಜಯರಾಮ್, ಜೇಸಿಐ ಆಧ್ಯಕ್ಷರಾದ ಬೈರೇಗೌಡ, ಗೌರವ ಕಾರ್ಯದರ್ಶಿಗಳಾದ ಚಿದಾನಂದ ಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾದ ವಿ. ಆನಂದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಆರ್ ಮುನಿರಾಜು, ಪದಾಧಿಕಾರಿಗಳಾದ ಮಾರ್ಕೆಟ್ ವೆಂಕಟೇಶ್, ಬಲಮುರಿ ಶ್ರೀನಿವಾಸ್ ಮೂರ್ತಿ, ಜನಾರ್ಧನ್, ಶಿಲ್ಪ, ಉಭಯ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು