ಕ್ರೋಧಿ ನಾಮ ಸಂವತ್ಸರ; ಮಳೆ ಕಡಿಮೆ
ವಿಜಯಪುರ.ಏ೧೨: ಕ್ರೋಧಿ ನಾಮ ಸಂವತ್ಸರವು ಹೆಸರೇ ತಿಳಿಸುವಂತೆ ರಾಜರುಗಳಲ್ಲಿ (ಅಂದರೆ ರಾಜಕೀಯ ಮಂತ್ರಿಗಳು ಮತ್ತು) ಪರಸ್ಪರ ವೈರತ್ವ, ವೈಮನಸ್ಸು, ಕಾಣಿಸಿಕೊಳ್ಳುತ್ತದೆ, ಈ ಸಾಲಿನಲ್ಲಿ ೨ ಕೊಳಗ ಮಳೆ, ೩ ಕೊಳಗ ಗಾಳಿ, ಇದ್ದು, ಮಳೆ, ಬೆಳೆ ಅಷ್ಟಾಗಿ ಇರುವುದಿಲ್ಲ ಎಂದು ಆನೇಕಲ್ ಛತ್ರದ ವೇದಾಂತ ಶಿಖಾಮಣಿ ಅಚ್ಚಪ್ಪ ಶಾಸ್ತ್ರಿಗಳು ತಿಳಿಸಿದರು.
ಅವರು ಇಲ್ಲಿನ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷದಂತೆ ಸಾರ್ವಜನಿಕರಿಗೆ ಪಂಚಾಂಗ ಶ್ರವಣದ ಫಲವನ್ನು ತಿಳಿಸುತ್ತಾ ಮಾತನಾಡುತ್ತಿದ್ದರು.
ಯುಗಾದಿ ಹಬ್ಬದ ಹೊಸ ದಿನವೂ ಮಂಗಳವಾರದಂದು ಬಂದಿದ್ದು ಮಂಗಳವಾರವು ಕುಜನ ವಾರವಾಗಿದ್ದು, ಕುಜ ಈ ಸಂವತ್ಸರದಲ್ಲಿ ರಾಜನಾಗಿದ್ದು, ಸದಾ ಕಾಲ ಯುದ್ಧಭೀತಿ ಕಂಡು ಬರುತ್ತದೆ. ಶನೇಶ್ವರ ಸ್ವಾಮಿಯು ಮಂತ್ರಿಯಾಗಿದ್ದು, ಮಳೆಗಳಿಗೆ ಅಧಿಪತಿ ಯಾಗಿರುವನು. ಪಶು ನಾಯಕನಾಗಿ ಯಮಧರ್ಮರಾಜನಿದ್ದು, ಕೃಷಿ ಹಿನ್ನಡೆ ಆಗಬಹುದೆಂದು ತಿಳಿಸಿದರು.
ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತೆ ಯುಗಾದಿ ಹಬ್ಬದ ದಿನ ಇಲ್ಲಿನ ಶ್ರೀ ಸೋಮೇಶ್ವರ ಸ್ವಾಮಿರವರಿಗೆ ವಿಶೇಷ ಪೂಜೆ ನಡೆಸಿ, ಸಂಜೆ ಪಂಚಾಂಗ ಶ್ರವಣ ನಡೆಸುತ್ತಿದ್ದು ಪಟ್ಟಣದ ಜನತೆ ಇಲ್ಲಿಗೆ ಆಗಮಿಸಿ ತಮ್ಮ ತಮ್ಮ ಹೆಸರು ಬಲದ ಮೇಲೆ ತಮಗೆ ಆಗುವ ಒಳಿತು ಕೆಡುಕುಗಳನ್ನು ಕೇಳುವುದಲ್ಲದೆ ವರ್ಷದ ಮಳೆ ಬೆಳೆ ಹಾಗೂ ನಾಮ ಸಂವತ್ಸರದ ಆಗುಹೋಗುಗಳನ್ನು ಕೇಳಿಕೊಂಡು ಹೋಗುವುದು ನಡೆದು ಬಂದಿರುತ್ತದೆ.
ಈ ಸಂದರ್ಭದಲ್ಲಿ ದೇವಾಲಯದ ಸಂಚಾಲಕರಾದ ಜಿವಿಜಿ ಜಗದೀಶ್, ಚಂದ್ರಣ್ಣ, ರವೀಂದ್ರ, ಎಲೆಬಸಪ್ಪ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅನ್ನಪೂರ್ಣಮ್ಮ, ಕೆಪಿಟಿಸಿ ಎಲ್‌ನ ಸಹಾಯಕ ಇಂಜಿನಿಯರ್ ವಿಶ್ವಾಸ್ ಮತ್ತಿತರರು ಉಪಸ್ಥಿತರಿದ್ದರು.