ಕಾಂಗ್ರೆಸ್ ಬೆಂಬಲಿಸಿದ ಶ್ರೀನಿವಾಸ್ ಅಭಿಮಾನಿಗಳ ಬಳಗ
ಸಂಜೆವಾಣಿ ನ್ಯೂಸ್
ಮೈಸೂರು: ಏ.12:- ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಮತ್ತು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳು ಒಗ್ಗೂಡಿ ಶ್ರಮಿಸುತ್ತೇವೆ ಎಂದು ಯುವ ಮುಖಂಡ ಭರತ್ ರಾಮಸ್ವಾಮಿ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವುಗಳು ವಿ.ಶ್ರೀನಿವಾಸ್ ಪ್ರಸಾದ್ ಅವರ ಅತ್ಯಾಪ್ತ ವರ್ಗದಲ್ಲಿ ಗುರುತಿಸಿಕೊಂಡವರಾಗಿದ್ದು, ಅವರ ರಾಜಕೀಯ, ಸಾಮಾಜಿಕ ಕಾರ್ಯಗಳಲ್ಲಿ ಅವರೊಟ್ಟಿಗೆ ನಿಂತು ಹೆಜ್ಜೆ ಹಾಕಿದ್ದೇವೆ. ಹಾಗೇ ಅವರು ಯಾವುದೇ ಪಕ್ಷದಲ್ಲಿದ್ದರೂ ಅವರೊಂದಿಗೆ ಇದ್ದು ಅವರ ನಿರ್ಧಾರಗಳನ್ನು ಒಪ್ಪಿಕೊಂಡಿದ್ದೇವೆ. ಈಗ ಅವರು ರಾಜಕೀಯ ನಿವೃತ್ತಿ ಘೋಷಿಸಿ ಯಾವ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಬಿಜೆಪಿ ನಾಯಕರು ಪ್ರಸಾದ್ ಅವರು ತಮ್ಮ ಜೊತೆ ರಾಜಕೀಯವಾಗಿ ಬಿಜೆಪಿ ಪಕ್ಷದಲ್ಲೇ ಗುರುತಿಸಿಕೊಂಡಿದ್ದಾರೆ. ಎನ್ನುವ ವದಂತಿ ಹಬ್ಬಿಸುತ್ತಿರುವುದು ಬೇಸರದ ಸಂಗತಿ ಎಂದರು.
ನಾವು ಅವರೊಂದಿಗೆ ನಮ್ಮ ರಾಜಕೀಯ ಭವಿಷ್ಯದ ಕುರಿತಾಗಿ ಚರ್ಚಿಸಿ, ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ನಿರ್ಧಾರವನ್ನು ತಿಳಿಸಿದ್ದಾಗ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ನಾವು ಮೂಲತಃ ಕಾಂಗ್ರೆಸಿಗರೇ ಆಗಿದ್ದು ಅನಿವಾರ್ಯದಿಂದ ಶ್ರೀನಿವಾಸ್ ಪ್ರಸಾದ್ ಅವರ ನಿರ್ಧಾರವನ್ನು ಗೌರವಿಸಿ ಅವರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರಿದ್ದೇವು. ಆ ಪಕ್ಷಕ್ಕೆ ಸೇರಿದ್ದರೂ ನಮ್ಮ ಸಿದ್ಧಾಂತಗಳಿಗೆ ಧಕ್ಕೆ ಬಾರದಂತೆ ರಾಜಕೀಯ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಹಿರಿತನಕ್ಕೆ ಹಾಗೂ ನಾಯಕತ್ವಕ್ಕೆ ಸಿಗಬೇಕಾದ ಗೌರವ, ಮನ್ನಣೆಗಳು ಸಿಗಲಿಲ್ಲ. ನಿಗಮ ಮಂಡಳಿ ನೇಮಕಾತಿ, ಎಂಎಲ್‍ಸಿ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ರಾಜಕೀಯ ಸಂದರ್ಭಗಳಲ್ಲಿ ಅವರ ಮಾತಿಗೆ ಮನ್ನಣೆ ಸಿಗದಿದ್ದದ್ದು ಶ್ರೀನಿವಾಸ್ ಪ್ರಸಾದ್‍ರವರಿಗೆ ಹಾಗೂ ನಮಗೆ ಬೇರ ಉಂಟು ಮಾಡಿದೆ. ಆದ್ದರಿಂದ ಮೈಸೂರು, ಚಾಮರಾಜನಗರ ಜಿಲ್ಲೆಯ ಅಪಾರ ಸಂಖ್ಯೆಯ ಬೆಂಬಲಿಗರು ಅಭಿಮಾನಿಗಳು ಸಭೆ ಸೇರಿ ಚರ್ಚಿಸಿ, ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದೆವು. ಈ ನಿರ್ಧಾರವನ್ನು ಶ್ರೀನಿವಾಸ್ ಪ್ರಸಾದ್ ಅವರ ಗಮನಕ್ಕೆ ತಂದಾಗ ಸಂತಸ ವ್ಯಕ್ತಪಡಿಸಿ ಮುಂದುವರೆಯುವಂತೆ ಸೂಚನೆ ನೀಡಿದರು. ಅದರಂತೆ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಮತ್ತು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳು ಒಗ್ಗೂಡಿ ಶ್ರಮಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿ.ಎಂ.ರಮೇಶ್, ಅಯ್ಯನಪುರ ಶಿವಕುಮಾರ್, ಸಿ.ಜಿ.ಶಿವಕುಮಾರ್, ಶಾಂತರಾಮ್ ಶೆಟ್ಟಿ ಉಪಸ್ಥಿತರಿದ್ದರು.