ಹೆಚ್.ಡಿ.ಕುಮಾರಸ್ವಾಮಿ ಯವರಿಗೆ ಮತ ನೀಡುವಂತೆ ಶಾಸಕ ಮಂಜು ಮನವಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.12: ಸುಭದ್ರ ರಾಷ್ಟ್ರ ನಿರ್ಮಾಣದ ಹಿತಾಸಕ್ತಿಗಾಗಿ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯಾಗಿದೆ. ರಾಷ್ಟ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಕುಮಾರಣ್ಣನಿಗೆ ಶಕ್ತಿ ತುಂಬಲು ಜಿಲ್ಲೆಯ ಮತಬಾಂಧವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಮೂಲ್ಯವಾದ ಮತ ನೀಡಿ ಲೋಕಸಭೆಗೆ ಕಳುಹಿಸುವಂತೆ ಶಾಸಕ ಹೆಚ್.ಟಿ.ಮಂಜು ಮತದಾರರಲ್ಲಿ ಮನವಿ ಮಾಡಿದರು.
ಅವರು ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ದೊಡ್ಡಕ್ಯಾತನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಮಾಜಿ ಸಚಿವ ನಾರಾಯಣಗೌಡರೊಂದಿಗೆ ಕರಪತ್ರಗಳನ್ನಿಟ್ಟು ವಿಶೇಷಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಕಾಂಗ್ರೆಸ್ ಕುಟುಂಬ ರಾಜಕಾರಣದಲ್ಲಿ ಮುಳುಗಿದೆ. ಕಾಂಗ್ರೆಸ್ ಪಕ್ಷ ತನ್ನ ಮಂತ್ರಿ ಮಹೋದಯರ ಮಕ್ಕಳು, ಅಳಿಯಂದಿರಿಗೆ ಟಿಕೆಟ್ ನೀಡಿದೆ. ಕುಮಾರಸ್ವಾಮಿ ಹೊರಗಿನವರಲ್ಲ. ಅವರು ರಾಜ್ಯದ ಜನರ ಆಸ್ತಿ. ಕುಮಾರಸ್ವಾಮಿ ಆಯ್ಕೆಯಾದರೆ ಅವರು ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಾರೆ. ಕುಮಾರಸ್ವಾಮಿ ಗೆಲುವು ನಿಶ್ಚಿತ. ಅವರು ಕೇಂದ್ರ ಸಚಿವರಾಗಿ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಾರೆ. ಪ್ರಧಾನಿ ಮೋದಿ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಮೋದಿ ಬಂದ ಅನಂತರ ಭಾರತ ಜಾಗತಿಕವಾಗಿ ವಿಜೃಂಭಿಸುತ್ತಿದೆ. ಪಾಕಿಸ್ತಾನ, ಚೀನಾದಂತಹ ನೆರೆ ರಾಷ್ಟ್ರಗಳು ಭಾರತವನ್ನು ಕೆಣಕಲು ಬೆದರುತ್ತಿವೆ.ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಿಯಂತ್ರಣಕ್ಕೆ ಬಂದಿದೆ. ಕಾಶ್ಮೀರ ಸಂಪೂರ್ಣವಾಗಿ ಭಾರತವಾಗಿದೆ. ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿ ಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ ಯಾಗಿದೆ ಎಂದ ಶಾಸಕರು ಅಭಿವೃದ್ಧಿಗಾಗಿ ಜನ ಬಿಜೆಪಿ ಜೆಡಿಎಸ್ ಮೈತ್ರಿ ಬೆಂಬಲಿಸುವಂತೆ ಮನವಿ ಮಾಡಿದರು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮತ್ತು ನನ್ನ ನಡುವೆ ವೈಯುಕ್ತಿಕ ಭಿನ್ನಾಭಿಪ್ರಾಯ ಇಲ್ಲ. ರಾಜಕೀಯವಾಗಿ ನಾವಿಬ್ಬರು ಭಿನ್ನ ಭಿನ್ನ ಪಕ್ಷದವರಾಗಿದ್ದೆವು.ಇದೀಗ ನಾವಿಬ್ಬರು ಒಂದಾಗಿದ್ದು ನಮ್ಮ ಮೈತ್ರಿಗೆ ಆನೆಬಲ ಬಂದಿದೆ ಎಂದರು.
ಹೇಮಾವತಿ ನೀರು ತುಮಕೂರಿಗೆ:-
ತೀವ್ರ ಬರಗಾಲ ಎದುರಿಸುತ್ತಿರುವ ಕಾವೇರಿ ಕೊಳ್ಳದ ಜಿಲ್ಲೆಗಳಿಗೆ ನೀರು ನೀಡದೆ ಹಾಸನ ಜಿಲ್ಲೆಯ ಗೊರೂರು ಜಲಾಶಯದಲ್ಲಿನ ನೀರನ್ನು ಹಾಸನ ಉಸ್ತುವಾರಿ ಸಚಿವ ರಾಜಣ್ಣ ಬಿಡಿಸಿಕೊಂಡು ಹೋಗುತ್ತಾರೆ. ಆದರೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರು ಸದಾ ರಾಜಕಾರಣ ಮಾಡಿಕೊಂಡು ರೈತರ ಬಗ್ಗೆ ಕಾಳಜಿಯಿಲ್ಲದಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ನರೇಂದ್ರಮೋದಿ ಸಂಪುಟದಲ್ಲಿ ಕುಮಾರ ಸ್ವಾಮಿಯವರು ಮಂತ್ರಿಯಾಗಲಿದ್ದಾರೆ:-
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ನಮ್ಮ ದೇಶದ ಜನರು ನರೇಂದ್ರಮೋದಿ ಅವರ ಕಾರ್ಯಕ್ರಮಗಳನ್ನು ಮೆಚ್ಚಿ ಬಿಜೆಪಿಗೆ ಮತನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಮೋದಿಯವರಿಗೆ ನಮ್ಮ ದೇಶದ ಮಾಜಿ ಪ್ರಧಾನಮಂತ್ರಿ, ರಾಜಕೀಯ ಭೀಷ್ಮ ಹೆಚ್.ಡಿ.ದೇವೇಗೌಡರು ಬೆಂಬಲ ನೀಡಿದ್ದಾರೆ. ನರೇಂದ್ರಮೋದಿ ಅವರು ಹ್ಯಾಟ್ರಿಕ್ ಅವಧಿಗೆ ಪ್ರಧಾನಿಯಾಗಲಿದ್ದಾರೆ. ನಮ್ಮ ಮೈತ್ರಿ ಅಭ್ಯರ್ಥಿ ಮಾಜಿ ಸಿ.ಎಂ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಕುಮಾರಣ್ಣ ಅವರಿಗೆ ರಾಮನಗರ ಹಾಗೂ ಮಂಡ್ಯ ಜಿಲ್ಲೆ ಎರಡು ಕಣ್ಣಗಳಿದ್ದಂತೆ. ಸೋನಿಯಾ ಗಾಂಧಿ ರಾಯ್ ಬರೇಲಿಯಿಂದ ಬಳ್ಳಾರಿಗೆ ಬಂದು ಚುನಾವಣೆಗೆ ನಿಲ್ಲಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಂದ ಹೋಗಿ ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲಬಹುದು. ರಾಹುಲ್‍ಗಾಂಧಿ ಅಮೇಥಿಯಿಂದ ವಯನಾಡುಗೆ ಬಂದು ನಿಲ್ಲಬಹುದು. ನಮ್ಮ ಕುಮಾರಣ್ಣ ನಮ್ಮ ಹೆಮ್ಮೆ ಮಂಡ್ಯ ಜಿಲ್ಲೆಗೆ ಚುನಾವಣೆಗೆ ನಿಲ್ಲಬಾರದೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ದೊಡ್ಡ ಕ್ಯಾತನಹಳ್ಲಿ, ಸಂತೇಬಾಚಹಳ್ಲಿ, ರಂಗನಾಥಪುರ ಕ್ರಾಸ್, ಅಘಲಯ, ಭಾರತಿಪುರ ಕ್ರಾಸ್, ಸಾರಂಗಿ, ಅಗ್ರಹಾರಬಾಚಹಳ್ಳಿ, ಮಾಕವಳ್ಳಿ, ಬಂಡೀಹೊಳೆ, ಹರಿಹರಪುರ, ಮಡುವಿನಕೋಡಿ ಗ್ರಾಮಪಂಚಾಯತಿ ಕೇಂದ್ರಗಳಲ್ಲಿ ಮತಯಾಚನೆ ಮಾಡಿದರು.
ಪ್ರಚಾರಸಭೆಯಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಾನಕೀರಾಮು, ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮುಡಾ ಮಾಜಿ ಅಧ್ಯಕ್ಷ ಕೆ ಶ್ರೀನಿವಾಸ್, ತಾ.ಪಂ.ಮಾಜಿ ಸದಸ್ಯರಾದ ಕುಮಾರ್, ಮೋಹನ್, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕರಾದ ಬಲದೇವ್, ಕೊರಟಿಕೆರೆದಿನೇಶ್, ರಘು, ತೋಟಪ್ಪಶೆಟ್ಟಿ, ಸಾಮಿಲ್ ರವಿಕುಮಾರ್, ಬಿಜೆಪಿ ಮಾಜಿ ಅಧ್ಯಕ್ಷ ಪರಮೇಶ್‍ಅರವಿಂದ್, ಹುಬ್ಬನಹಳ್ಳಿಬಲರಾಮು, ಅಘಲಯಅಜಯ್, ಶಾಸಕರ ಆಪ್ತಸಹಾಯಕ ಪ್ರತಾಪ್ ಸೇರಿದಂತೆ ಆಯಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಮುಖಂಡರು ಕಾರ್ಯಕರ್ತರು ಹಾಜರಿದ್ದರು.