ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಪರ ವಿಜಯೇಂದ್ರ ಭರ್ಜರಿ ರೋಡ್ ಶೋ
ಸಂಜೆವಾಣಿ ವಾರ್ತೆ
ಹನೂರು. ಏ. 12- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಎನ್. ಬಾಲರಾಜು ಪರವಾಗಿ ಕೊಳ್ಳೇಗಾಲ ಹಾಗೂ ಹನೂರಿನಲ್ಲಿ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ನಿನ್ನೆ ಬೆಳಗ್ಗೆ ಕೊಳ್ಳೇಗಾಲಕ್ಕೆ ಆಗಮಿಸಿದ ವಿಜಯೇಂದ್ರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಸಾರಿಗೆ ಬಸ್ ನಿಲ್ದಾಣದ ಹತ್ತಿರದಲ್ಲಿರುವ ದೇವಲಾ ಮಹರ್ಷಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರೋಡ್ ಶೋ ಆರಂಭಿಸಿದರು. ಡಾ. ರಾಜ್‍ಕುಮಾರ್ ರಸ್ತೆ ಮಾರ್ಗವಾಗಿ ರೋಡ್‍ಶೋ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಚಾ.ನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಮಾಜಿ ಶಾಸಕ ಹಾಗೂ ಸಜ್ಜನ ರಾಜಕಾರಣಿ ಎಸ್. ಬಾಲರಾಜ್ ಅವರು ಸ್ಪರ್ಧೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಅಭಿವೃದ್ದಿ ಪರ ಆಡಳಿತ ಮತ್ತು ದೇಶದ ಭದ್ರತ ಮತ್ತು ಭ್ರಷ್ಟಚಾರ ರಹಿತ ಆಡಳಿತಕ್ಕಾಗಿ ಬಿಜೆಪಿಗೆ ಮತ ನೀಡಬೇಕು. ಕೊಳ್ಳೇಗಾಲ ಕ್ಷೇತ್ರದ ಸವಾರ್ಚಿಗೀಣ ಅಭಿವೃದ್ದಿಗೆ ನಮ್ಮ ಪಕ್ಷ ಬದ್ದವಾಗಿದೆ ಎಂದರು.
ಹನೂರಿನಲ್ಲಿ ರೋಡ್ ಶೋ: ರಾರಾಜಿಸಿದ ಜೆಡಿಎಸ್ ಬಾವುಟ : ನಂತರ ಹನೂರಿನಲ್ಲಿ ನಡೆದ ರೋಡ್ ಶೋನಲ್ಲಿ ಬಿಜೆಪಿ ಬಾವುಟದ ಜೊತೆಗೆ ಜೆಡಿಎಸ್ ಬಾವುಟಗಳು ರಾರಾಜಿಸಿದವು. ಕೊಳ್ಳೇಗಾಲ ಮತ್ತು ಹನೂರಿನಲ್ಲಿ ನಡೆದ ರೋಡ್ ಶೋನಲ್ಲಿ ಜೆಡಿಎಸ್ ಶಾಸಕ ಮಂಜುನಾಥ್ ವಿಜಯೇಂದ್ರ ಜೊತೆಗೆ ಭಾಗವಹಿಸುವ ಮೂಲಕ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರು.
ಅಲ್ಲದೇ ಹನೂರು ರೋಡ್ ಶೋನಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದರು. ಸುಮಾರು 2 ಕಿ.ಮೀ. ನಡೆದ ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಸ್ ನಿಲ್ದಾಣದಲ್ಲಿ ವಿಜಯೇಂದ್ರ, ಅಭ್ಯರ್ಥಿ ಬಾಲರಾಜು, ಮಾಜಿ ಸಚಿವ ಎನ್. ಮಹೇಶ್, ಶಾಸಕ ಮಂಜುನಾಥ್, ಸೇರಿದಂತೆ ಅನೇಕ ನಾಯಕರು ಮಾತನಾಡಿದರು.
ಇದಕ್ಕೂ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 10 ತಿಂಗಳ ಕಾಂಗ್ರೆಸ್ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಕೇವಲ 5 ಗ್ಯಾರಂಟಿಗಳನ್ನು ಇಟ್ಟುಕೊಂಡು ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದಾರೆ. ರೈತರು ಹಾಗೂ ಬಡವರ ಬಗ್ಗೆ ಇವರ ಯೋಜನೆಗಳು ಏನು? ಈ ಗ್ಯಾರಂಟಿಗಳು ಸಹ ಸಮರ್ಪಕವಾಗಿ ಮಹಿಳೆಯರಿಗೆ ತಲುಪಿಲ್ಲ. ಹೋದ ಕಡೆಗಳಲ್ಲಿ ಮಹಿಳೆಯರೇ ಈ ಸರ್ಕಾರ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ ಎಂದು ದೂರಿದರು.
ಅನುಭವಿ ಮುಖ್ಯಮಂತ್ರಿಗಳು, 14 ಬಾರಿ ಬಜೆಟ್ ಮಂಡಿಸಿರುವ ಖ್ಯಾತಿಯನ್ನು ಹೊಂದಿರುವ ಸಿದ್ದರಾಮಯ್ಯ ಅವರು ಗ್ಯಾರಂಟಿಯನ್ನು ಜಾರಿ ಮಾಡಿ ಒಂದು ಕಡೆ ನಮ್ಮ ತಾಯಿಂದಿರಿಗೆ 2 ಸಾವಿರ ನೀಡಿ, ಮತ್ತೊಂದು ಕಡೆಯಿಂದ ತೆರಿಗಳನ್ನು ಹೆಚ್ಚಳ ಮಾಡಿ, ಬರೆ ಹಾಕಿದ್ದಾರೆ. ಎಲ್ಲ ದರಗಳನ್ನು ಏರಿಕೆ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆಯಾಗಿದೆ. ಅಬಕಾರಿ ತೆರಿಗೆಯನ್ನು ಎರಡು ಪಟ್ಟು ಹೆಚ್ಚಳ ಮಾಡುವ ಮೂಲಕ ದುಡಿದ ದಣಿವರಿದ ನನ್ನ ಅಣ್ಣ ತಮ್ಮಂದಿರಿಗೆ ಮದ್ಯಕ್ಕೆ ಹೆಚ್ಚಳ ಮಾಡಿ ಅವರು ಜೇಬು ಖಾಲಿ ಮಾಡುತ್ತಿದ್ದಾರೆ. ಇದೇನಾ ಅಭಿವೃದ್ದಿ ಎಂದರು.
ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಂಡಿದ್ದಾರೆ. 2047 ರ ವೇಳೆಗೆ ಭಾರತ ಅಭಿವೃದ್ದಿ ಹೊಂದಿದ ದೇಶವನ್ನಾಗಿಸಲು ಸಂಕಲ್ಪ ಮಾಡಿದ್ದಾರೆ.ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತಿದ್ದು ಇದರಲ್ಲಿ ದೇಶದ ಅಭಿವೃದ್ದಿ ಮುಖ್ಯವಾಗಿದೆಯೇ ಹೊರತು ಸ್ವಾರ್ಥವಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿಗಳಿಗೆ ಅಧಿಕಾರ ಮದದಿಂದ ಮೋದಿ ಹಾಗೂ ಹಿರಿಯರಾದ ದೇವೇಗೌಡರ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದು 11 ತಿಂಗಳಲ್ಲಿ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿದರು. ಆದರೆ, ರಾಜ್ಯ ರೈತರಿಗೆ ಕಿಸಾನ್ ಸನ್ಮಾನ್ ಯೋಜನೆಯಡಿ ಯಡಿಯೂರಪ್ಪ ಅವರು ರೈತರಿಗೆ ನೀಡುತ್ತಿದ್ದ 4 ಸಾವಿರ ರೂಗಳನ್ನು ತಡೆ ಹಿಡಿಯುವ ಮೂಲಕ ರೈತರ ವಿರೋಧಿ ಧೋರಣೆಯನ್ನು ಅನುಸರಿಸಿದರು. ರೈತರ ಪರವಾದ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಸಿದ್ದರಾಮಯ್ಯ ಎಲ್ಲಾ ವರ್ಗದ ರೈತರಿಗೆ ಅನುಕೂಲವಾಗಿದ್ದ ಯೋಜನೆಯನ್ನ ಸ್ಥಗಿತಗೊಳಿಸಿ ರೈತರು ಹಾಗೂ ರೈತರ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಎಂದರು.
ಕೇಂದ್ರ ಸರ್ಕಾರದಿಂದ ನಮ್ಮ ತೆರಿಗೆ ತಕ್ಕ ಅನುದಾನ ಬಂದಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಒಮ್ಮೆ ಯುಪಿಎ ಅವಧಿಯ 10 ವರ್ಷಗಳ ಅಡಳಿತದಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿತ್ತು .ಈಗ ಮೋದಿ ಅವರು ಹತ್ತು ವóರ್ಷಗಳ ಆಡಳಿತದಲ್ಲಿ ಎಷ್ಟು ಹಣ ಬಂದಿದೆ ಎನ್ನುವುದನ್ನು ತುಲನೆ ಮಾಡಿದರೆ, ಮೂರು ಪಟ್ಟು ಹೆಚ್ಚು ಹಣವನ್ನು ರಾಜ್ಯದ ಅಭಿವೃದ್ದಿಗೆ ಮೋದಿ ಅವರು ನೀಡಿದ್ದಾರೆ. ಬಹಳಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಿದ್ದರೆ, ಕೇವಲ ಕೇಂದ್ರದ ವಿರುದ್ದ ಬೊಟ್ಟು ಮಾಡುವ ಬದಲು ರಾಜ್ಯ ಜನರ ಅಭಿವೃದ್ದಿಯ ಕಡೆ ಕಾಂಗ್ರೆಸ್‍ನವರು ಚಿಂತನೆ ಮಾಡುವುದು ಒಳಿತು ಎಂದು ವಿಜಯೇಂದ್ರ ಅಂಕಿಅಂಶಗಳ ಸಹಿತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‍ಕುಮಾರ್, ಎನ್‍ಡಿಎ ಅಭ್ಯರ್ಥಿ ಎಸ್. ಬಾಲರಾಜು, ಜಿಲ್ಲಾ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಜೆಡಿಎಸ್ ಶಾಸಕ ಮಂಜುನಾಥ್, ಲೋಕಸಭಾ ಚುನಾವಣಾ ಪ್ರಭಾರಿ ಎನ್.ವಿ. ಫಣೀಶ್, ಕ್ಷೇತ್ರ ಸಂಚಾಲಕ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಮುಖಂಡರಾದ ರಮೇಶ್, ಕೇಂದ್ರ ಬರಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಪ್ರೀತಮ್ ನಾಗಪ್ಪ, ಇತರರು ಇದ್ದರು.