ಹುಣಸಿಹಡಗಿಲ್‍ದಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಏ. 13ರಿಂದ 17ರವರೆಗೆ
ಕಲಬುರಗಿ:ಏ.11: ತಾಲ್ಲೂಕಿನ ಸುಕ್ಷೇತ್ರ ಹುಣಸಿಹಡಗಿಲ್ ಗ್ರಾಮದಲ್ಲಿರುವ ದಿಗಂಬರ್ ಜೈನ್ ಮಹಾಸಭಾ ಲಕ್ನೋ ಸಹಯೋಗದಿಂದ ಜೀರ್ಣೋದ್ಧಾರವಾದ ಪುರಾತನ ತ್ರಿಕೂಟ ಜಿನಮಂದಿರದ 1008 ಶ್ರೀ ಶಾಂತಿನಾಥ್ ಭಗವಾನ್ ಮಂದಿರದ ಧಾಮ ಸಂಪ್ರೋಕ್ಷಣ ಹಾಗೂ ಜಿನಬಿಂಬ ಶುದ್ಧ 1008 ಶ್ರೀ ಮುನಿಸುವ್ರತನಾಥ್ ಭಗವಾನ್ ಹಾಗೂ 1008 ಶ್ರೀ ಮಹಾವೀರ್ ಭಗವಾನ್ ಅವರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಾರಂಭವು ಏಪ್ರಿಲ್ 13ರಿಂದ 17ರವರೆಗೆ ಜರುಗಲಿದೆ ಎಂದು ಮಹೋತ್ಸವದ ಮಾಧ್ಯಮ ಸಂಯೋಜಕ ಸುರೇಶ್ ಎಸ್. ತಂಗಾ ಅವರು ತಿಳಿಸಿದ್ದಾರೆ.
ಪ್ರಜ್ಞಾಶ್ರಮಣ ಸಾರಸತ್ವಾಚಾರ್ಯ 108 ಶ್ರೀ ದೇವನಂದಿ ಮುನಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಸಕಲಕೀರ್ತಿ ಮುನಿಮಹಾರಾಜರ ಹಾಗೂ ಅರ್ಕಕೀರ್ತಿ ಕ್ಷುಲ್ಲಕರು ದಿವ್ಯ ಸಾನಿಧ್ಯದಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆ ಪಂಚಕಲ್ಯಾಣ ಮಹಾಮಹೋತ್ಸವ ಜರುಗಲಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಐದು ದಿನಗಳ ಕಾಲ ಜರುಗಲಿರುವ ಈ ಸಮಾರಂಭದಲ್ಲಿ ವರೂರ್, ಸೋಂದಾ, ಎನ್.ಆರ್. ಪುರ, ನಾಂದಣಿ, ಕೊಲ್ಲಾಪೂರ್ ಜೈನ್ ಮಠಗಳ ಭಟ್ಟಾರಕರ ಉಪಸ್ಥಿತಿಯಲ್ಲಿ ಏಪ್ರಿಲ್ 13ರಂದು ಪ್ರಥಮ ದಿನ ಗರ್ಭ ಕಲ್ಯಾಣ, 14ರಂದು ಪವಿತ್ರ ಜನ್ಮ ಕಲ್ಯಾಣ, 15ರಂದು ದೀಕ್ಷ ಕಲ್ಯಾಣ ಮತ್ತು 16ರಂದು ಕೇವಲ ಜ್ಞಾನ ಕಲ್ಯಾಣ, ಕೊನೆಯ ದಿನ 17ರಂದು ಮೋಕ್ಷ ಕಲ್ಯಾಣ ಜರುಗಲಿದೆ. ಪ್ರೊ. ಡಾ. ಪಂಡಿತ್ ಮಹಾವೀರ್ ಪ್ರಭಾಚಂದ್ರ ಶಾಸ್ತ್ರಿ ಸೊಲಾಪೂರ್ ಅವರು ಮುಖ್ಯ ಪ್ರತಿಷ್ಠಾಚಾರ್ಯರಾಗಿ ಶಾಂತಿನಾಥ್ ಪಂಡಿತ್ ತಡಕಲ್ ಪ್ರತಿಷ್ಠಾಚಾರ್ಯರು, ಅನಂತಕುಮಾರ್ ಮಾಲಗತ್ತಿ ಸೋಲಾಪೂರ್ ಅವರಿ ಸಹ ಪ್ರತಿಷ್ಠಾಚಾರ್ಯರಾಗಿ ಸನ್ಮಾರ್ಗದರ್ಶನದಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನ ಸಮಾರಂಭಗಳು ಜರುಗಲಿವೆ. ಭವ್ಯ ಸಮಾರಂಭಕ್ಕೆ ನಾಡಿನ ಹರಗುರು ಚರಮೂರ್ತಿಗಳು, ರಾಜಕೀಯ ಧುರೀಣರು, ಕವಿ-ಕಲಾವಿದರು ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಪುಣ್ಯಕ್ಷೇತ್ರ ಹುಣಸಿಹಡಗಿಲ್ ಗ್ರಾಮವು ಸಮಾರಂಭಕ್ಕಾಗಿ ಸಕಲ ರೀತಿಯಿಂದ ಸನ್ನದ್ಧಗೊಂಡಿದ್ದು ಸಕಲ ಗ್ರಾಮಸ್ಥರು ಹಾಗೂ ಜಿಲ್ಲಾ ಸಕಲ ಜೈನ್ ಸಮಾಜ ಬಾಂಧವರು, ಟ್ರಸ್ಟ್‍ನ ಸಮಸ್ತರು ಪಂಚಕಲ್ಯಾಣ ಸಮಾರಂಭದ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸುವ ಕರ್ನಾಟಕ ಸೇರಿದಂತೆ ರಾಜ್ಯದ ಮತ್ತು ದಕ್ಷಿಣ ಭಾರತದಾದ್ಯಂತ ಆಗಮಿಸುವ ಶ್ರಾವಕ-ಶ್ರಾವಕಿಯರಿಗೆ ಹಾಗೂ ಭಕ್ತಾದಿಗಳಿಗೆ ಅಚ್ಚುಕಟ್ಟಾದ ವಸತಿ ಮತ್ತು ಪ್ರಸಾದ ವ್ಯವಸ್ಥೆ ನಿರ್ವಹಿಸಲಾಗುವುದು. ಪ್ರತಿದಿನ ಯಾತ್ರಾರ್ಥಿಗಳಿಗೆ ಆಗಮಿಸಲು ಕಲಬುರಗಿ ನಗರದ ಸಿಟಿಬಸ್ ನಿಲ್ದಾಣದಿಂದ ಸುಕ್ಷೇತ್ರ ಹುಣಸಿಹಡಗಿಲವರೆಗೂ ಸರ್ಕಾರಿ ಸಾರಿಗೆ ವ್ಯವಸ್ಥೆ ಇದೆ. ಇಂತಹ ಪುಣ್ಯಮಯ ಸಮಾರಂಭದಲ್ಲಿ ಸಮಸ್ತರು ಭಾಗವಹಿಸಿ ಧರಣೇಂದ್ರ ಪದ್ಮಾವತಿ ಅಮ್ಮನವರ ಆಶೀರ್ವಾದ ಪಡೆದು ಕೃಪೆಗೆ ಪಾತ್ರರಾಗಬೇಕು ಎಂದು ಅವರು ಕೋರಿದ್ದಾರೆ.