ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜಯಪುರದ ವೇದಾಂತ ನಾವಿಗೆ ಫಸ್ಟ್ ರ್ಯಾಂಕ್ರಾಜ್ಯದಲ್ಲೇ ವಿಜಯಪುರ ಜಿಲ್ಲೆಗೆ ಮೂರನೇ ಸ್ಥಾನದ ಪಟ್ಟ!
ರುದ್ರಪ್ಪ ಆಸಂಗಿ
ವಿಜಯಪುರ,ಏ.11:ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಎಂದರೆ ಬೆಂಗಳೂರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಫಸ್ಟ್ ರ್ಯಾಂಕ್ ಬಾಚಿಕೊಂಡು ಮೊದಲ ಸ್ಥಾನದಲ್ಲಿ ನಿಲ್ಲುವುದು ಸಾಮಾನ್ಯವಾಗಿತ್ತು. ವಿಜಯಪುರ ಜಿಲ್ಲೆÀ ಪದೇ ಪದೇ ಕಳಪೆ ಫಲಿತಾಂಶ ಪಡೆದು ಜಿಲ್ಲೆಯ ವಿದ್ಯಾರ್ಥಿಗಳು ಕೈ ಕೈ ಹಿಚುಕಿಕೊಂಡು ತಮ್ಮ ಹಣೆಬರಹವನ್ನು ಶಪಿಸಿಕೊಳ್ಳುವುದೇ ಗತಿಯಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿ ಜಿಲ್ಲೆಯ ಹಣೆಬರಹವನ್ನೇ ಬದಲಿಸಿದ್ದಾರೆ. ಇಡೀ ರಾಜ್ಯವೇ ವಿಜಯಪುರ ಜಿಲ್ಲೆಯ ಕಡೆಗೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ.
ಹೌದು. ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳು ಈ ಬಾರಿ ಉತ್ತಮ ಸಾಧನೆ ಮಾಡಿದ್ದರಿಂದಾಗಿ ಕಳೆದ ವರ್ಷ ಫಲಿತಾಂಶದಲ್ಲಿ 5ನೇ ಸ್ಥಾನದಲ್ಲಿದ್ದ ವಿಜಯಪುರ ಜಿಲ್ಲೆ ಈ ಸಲ 3ನೇ ಸ್ಥಾನಕ್ಕೆ ಜಿಗಿತ ಕಂಡು ಜಿಲ್ಲೆಯ ವಿದ್ಯಾರ್ಥಿಗಳು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಶೇ. 84.69ರಷ್ಟು ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಸಲ ಶೇ.94.89ರಷ್ಟು ಫಲಿತಾಂಶ ಬಂದು ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಸಮಾನವಾಗಿ ನಿಲ್ಲುವಂತಾಗಿದೆ. ವಿಜಯಪುರ ಜಿಲ್ಲೆಯ ಪಿ.ಯು ವಿದ್ಯಾರ್ಥಿಗಳು ನಾವೂ ಪ್ರತಿಭೆಯಲ್ಲಿ ಯಾರಿಗಿಂತಲೂ ಕಡಮೆ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಕಳೆದ 2020 ರಲ್ಲಿ ಜಿಲ್ಲೆಯ ಪಿಯುಸಿ ಪರೀಕ್ಷೆ ಫಲಿತಾಂಶ ರಾಜ್ಯದಲ್ಲಿ 32 ನೇ ಸ್ಥಾನದಲ್ಲಿತ್ತು. ಆಗ ಪಾತಾಳಕ್ಕಿಳಿದ ಜಿಲ್ಲೆಯ ಪಿಯುಸಿ ಫಲಿತಾಂಶ ಇಂದು ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಜಿಗಿತ ಕಂಡಿರುವುದು ಪದವಿ ಪೂರ್ವ ಶಿಕ್ಷಣ ಇಲಾಖೆ ಶ್ರಮದ ಫಲ ಸಾಕಾರಗೊಂಡಿದೆ ಎಂದು ಬೇರೆ ಹೇಳಬೇಕಿಲ್ಲ.
ಶೇಕಡಾವಾರು ಫಲಿತಾಂಶದಲ್ಲಿ ಏರಿಕೆ:
ಪ್ರಸಕ್ತ ಪಿಯುಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಗೆ ರಾಜ್ಯದಲ್ಲಿ 3 ನೇ ಸ್ಥಾನ ಲಭಿಸಿದ್ದು, ಅಷ್ಟೇ ಅಲ್ಲ. ಶೇಕಡಾವಾರು ಫಲಿತಾಂಶದಲ್ಲೂ ಹೆಚ್ಚಳ ಕಂಡಿದೆ.
ಕಳೆದ 2020 ರಲ್ಲಿ 32 ನೇ ಸ್ಥಾನ (ಶೇ.54.22)ದಿಂದ ಹಂತ ಹಂತವಾಗಿ ಪಿಯುಸಿ ಪರೀಕ್ಷೆ ಏರಿಕೆ ಕಾಣುತ್ತ ಬಂದಿದ್ದು, 2021 ರಲ್ಲಿ ಕೋವಿಡ್ ಸಂಕಷ್ಟದಿಂದ ಪರೀಕ್ಷೆ ನಡೆಸದೆ ನೇರವಾಗಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಯಿತು. 2022 ರಲ್ಲಿ ರಾಜ್ಯಕ್ಕೆ 3ನೇ ಸ್ಥಾನ (ಶೇ.77), 2023 ರಲ್ಲಿ 5ನೇ ಸ್ಥಾನ (ಶೇ.84.69) ಹಾಗೂ 2024 ರ ಪ್ರಸಕ್ತ ವರ್ಷ 3ನೇ ಸ್ಥಾನ (94.89)ಕ್ಕೆ ಫಲಿತಾಂಶ ಏರಿಕೆ ಕಂಡಿದ್ದು, ಜಿಲ್ಲೆಯ ಜನರಲ್ಲಿ ಸಂತಸ ಮೂಡಿದೆ.
ಕಳೆದ 2023 ರಲ್ಲಿ ಜಿಲ್ಲೆ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದರೂ ಶೇಕಡಾವಾರು ಫಲಿತಾಂಶದಲ್ಲಿ ಹೆಚ್ಚಳ ಕಂಡಿದ್ದು ಗಮನಾರ್ಹ. ಸದ್ಯ ಕಳೆದ ವರ್ಷದ ಫಲಿತಾಂಶದ ಶೇಕಡಾವಾರಿಗಿಂತಲೂ ಪ್ರಸಕ್ತ ವರ್ಷದ ಫಲಿತಾಂಶದ ಶೇಕಡಾವಾರನಲ್ಲಿ ಶೇ.10 ರಷ್ಟು ಹೆಚ್ಚಳವಾಗಿರುವುದು ಒಂದು ವಿಶೇಷ ಎನ್ನಬಹುದು.
ಫಲ ನೀಡಿದ ವಿನೂತನ ಪ್ರಯೋಗ:
ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ವಿನೂತನ ಪ್ರಯೋಗಕ್ಕೆ ಕೈಹಾಕಿತ್ತು. ಕಳೆದ ವರ್ಷ ಪ್ರಥಮ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಹಿನ್ನಡೆ ಸಾಧಿಸಿದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು, ಎ,ಬಿ,ಸಿ ವರ್ಗಗಳನ್ನಾಗಿ ವಿದ್ಯಾರ್ಥಿಗಳನ್ನು ವಿಂಗಡಿಸಿ, ವಿಶೇಷ ತರಗತಿಗಳನ್ನು ನಡೆಸಿದÀ ಪ್ರತಿಫಲವೇ ಈ ಬಾರಿ ಉತ್ತಮ ಫಲಿತಾಂಶ ಬರಲು ಕಾರಣವಾಗಿದೆ.
ಮೊದಲ ಪಿಯುಸಿ ಪರೀಕ್ಷೆಯಲ್ಲಿ ಹಿನ್ನಡೆ ಸಾಧಿಸಿದ ಬಿ ಹಾಗೂ ಸಿ ವಿಭಾಗದ ವಿದ್ಯಾರ್ಥಿಗಳಿಗೆ ಧಾರವಾಡ, ಮಂಗಳೂರು ಇತರೆ ಭಾಗದ ನುರಿತ ಶಿಕ್ಷಕರನ್ನು ಕರೆಯಿಸಿ ಹೆಚ್ಚುವರಿಯಾಗಿ ತರಗತಿಗಳನ್ನು ತೆಗೆದುಕೊಂಡಿರುವ ಪರಿಣಾಮದಿಂದಾಗಿ ಈ ಬಾರಿ 3 ನೇ ಸ್ಥಾನಕ್ಕೆ ಏರಿಕೆಯಾಗಿದೆ. ಅಲ್ಲದೆ ಕಲಾ ವಿಭಾಗದಲ್ಲಿ ವೇದಾಂತ ನಾವಿ ರಾಜ್ಯಕ್ಕೆ ಟಾಪರ್ ಸ್ಥಾನ ಪಡೆದುಕೊಂಡಿದ್ದಾನೆ.
ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅಸೈನಮೆಂಟ್, ಪ್ರೊಜೆಕ್ಟ್ ವರ್ಕ್‍ಗಳಿಂದ ಹೆಚ್ಚುವರಿ ಅಂಕ ಗಳಿಸಲು ಸಾಧ್ಯವಾಗಿದ್ದು, ರಾಜ್ಯದಲ್ಲಿ ಜಿಲ್ಲೆ 3ನೇ ಸ್ಥಾನ ಪಡೆಯುವುದರ ಜೊತೆಗೆ, ಜಿಲ್ಲೆಯ ವಿದ್ಯಾರ್ಥಿ ವೇದಾಂತ ನಾವಿ ಟಾಪರ್ ಆಗಿರುವುದು ಇಲಾಖೆ ಪಟ್ಟ ಶ್ರಮಕ್ಕೆ ಫಲ ದೊರೆತಿದೆ.
-ಚಂದ್ರಶೇಖರ ಹೊಸಮನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ವಿಜಯಪುರ