ಶ್ರೀ ಗುರುಪಾದೇಶ್ವರ ಕಾಲೇಜಿಗೆ ಶತಪ್ರತಿಶತ ಫಲಿತಾಂಶ
ಕಲಬುರಗಿ:ಏ.11:ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡಿದ್ದು ಕೇವಲ 13 ವಿದ್ಯಾರ್ಥಿಗಳು. ಇವರಲ್ಲಿ ಇಬ್ಬರು ಡಿಸ್ಟಿಂಕ್ಷನ್‍ದಲ್ಲಿ ಪಾಸಾದರೆ ಇನ್ನುಳಿದವರಲ್ಲಿ ಹತ್ತು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ಹೌದು, ಇದು ನಗರದ ಜೇವರ್ಗಿ ರಸ್ತೆಯಲ್ಲಿ ಬರುವ ಸಿದ್ಧಾರೂಢ ಮಠದ ಮೇಲಿರುವ ಶ್ರೀ ಗುರುಪಾದೇಶ್ವರ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದ ಯಶೋಗಾಥೆ.
ಕೋವಿಡ್ ಸಂದರ್ಭದಲ್ಲಿ ಬಂದ್ ಆಗಿದ್ದ ಈ ಕಾಲೇಜನ್ನು ಪುನ: 2022ರಲ್ಲಿ ಆರಂಭಿಸಲಾಯಿತು. ಆಗ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆಯೇ ಹದಿಮೂರು ಮಾತ್ರ. ಇವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದ ಸರ್ಕಾರಿ ಹೈಸ್ಕೂಲ್‍ಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು.
ಇಂಥ ಮಕ್ಕಳಿಗೆ ಪ್ರವೇಶ ನೀಡಿದ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜು ಎಲ್ಲ ಮಕ್ಕಳಿಗೆ ಚೆನ್ನಾಗಿ ಓದಿಸಿದ ಪರಿಣಾಮವಾಗಿ ಇಬ್ಬರು ಡಿಸ್ಟಿಂಕ್ಷನ್ ಮತ್ತು ಉಳಿದವರೆಲ್ಲ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಯಿತು. ಮಕ್ಕಳ ಬಗ್ಗೆ ಎಲ್ಲ ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ವಿಶೇಷ ಕಾಳಜಿ ವಹಿಸಿದ್ದರ ಪರಿಣಾವiವಾಗಿ ಇಂಥ ಉತ್ತಮ ಫಲಿತಾಂಶ ಬರಲು ಕಾರಣವಾಯಿತು.
ಕಾಲೇಜಿನ ವಿದ್ಯಾರ್ಥಿನಿ ವಿನುತಾ 529 ಅಂದರೆ ಶೇಕಡಾ 88.16 ಮತ್ತು ರಕ್ಷಿತಾ 516 ಅಂದರೆ ಶೇಕಡಾ 86 ರಷ್ಟು ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.
ಮಲ್ಲಿಕಾರ್ಜುನ 509, ಅನಿತಾ 504, ಪ್ರೀಯಾ 463, ಅಭಿಷೇಕ 458, ಜಾನಕಿ 424, ಸುಹಾಸಿನಿ 405, ಸೋನುಬಾಯಿ 373, ಅಲೋಕ 369, ಸ್ನೇಹಾ 362, ರುಕ್ಮುದ್ದಿನ್ 362 ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಉಪನ್ಯಾಸಕರಿಗೆ ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಮತ್ತು ಕಾರ್ಯದರ್ಶಿ ಗುರುಪ್ರಸಾದ ಅಂಬಲಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.